ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಬೃಹತ್‌ ಪ್ರತಿಭಟನೆ

ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಬೃಹತ್‌ ಪ್ರತಿಭಟನೆ


ಬೆಂಗಳೂರು: ಆದಾಯ ತೆರಿಗೆ, ಇಡಿ, ಸಿಬಿಐ ಮೂಲಕ ಕೇಂದ್ರ ಬಿಜೆಪಿ ಸರ್ಕಾರವು ಒಕ್ಕಲಿಗರ ಮುಖಂಡ ಕನಕಪುರ ಶಾಸಕ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗ ಸಂಘ-ಸಂಸ್ಥೆಗಳ ಒಕ್ಕೂಟದ ಜೊತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಷಾ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಐಟಿ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಐಟಿ ಇಡಿ ಸಿಬಿಐ ರಾಜಕೀಯ ದುರುದ್ದೇಶಕ್ಕೆ ಮಾತ್ರವೇ ಈ ಇಲಾಖೆಗಳು ಬಳಕೆಯಾಗುತ್ತಿವೆ. ಹಿಂದೆ ದೇಶದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿಯವರೇ ಐಟಿ ಇಲಾಖೆ ಮುಂದೆ ಪ್ರತಿಭಟನೆ ಮಾಡಬೇಕಾಯಿತು.
ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆ ಕಾಂಗ್ರೆಸಿನ ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ತಾವು ಸೇರಿದಂತೆ ಹಲವರು ಪ್ರತಿಭಟಿಸಬೇಕಾಯಿತು ಎಂದರು.

ಪ್ರಜಾಪ್ರಭುತ್ವದಲ್ಲಿ ಪಕ್ಷಪಾತ ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರ ಮೇಲೆ ಅಷ್ಟೇ ಏಕೆ ಐಟಿ ದಾಳಿ ಆಗುತ್ತಿದೆ. ಬಿಜೆಪಿ ನಾಯಕರ ಮೇಲೆ ಏಕೆ ಇಲ್ಲ ಎಂದು ಪ್ರಶ್ನಿಸಿದ ಅವರು, ಮೋದಿ ಮತ್ತೆ ಪ್ರಧಾನಿ ಆಗಿದ್ದಕ್ಕಾಗಿ ಬೇಸರವಿಲ್ಲ. ಆದರೆ ಪ್ರಧಾನಿಯಾಗಿ ಅವರು ದೇಶದ ಉದ್ಧಾರಕ್ಕೆ ನಿಲ್ಲುವ ಬದಲು ದ್ವೇಷದ ರಾಜಕಾರಣಕ್ಕೆ ವಿರೋಧಪಕ್ಷಗಳನ್ನು ನಾಶ ಮಾಡಲು ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಹ ಆಕ್ರೋಶ ವ್ಯಕ್ತಪಡಿಸಿದರು‌.

ಡಿ.ಕೆ ಶಿವಕುಮಾರ್ ಎಲ್ಲಾ ರೀತಿಯ ತನಿಖೆಗೂ ಸಹಕರಿಸಿ, ವಿಚಾರಣೆಗೂ ಹಾಜರಾಗಿದ್ದಾರೆ. ಗುಜರಾತ್ ಶಾಸಕರನ್ನು ಬಿಜೆಪಿಯ ಒತ್ತಡದಿಂದ ರಕ್ಷಿಸಿದ್ದಕ್ಕಾಗಿ ಅವರನ್ನು ರಾಜಕೀಯ ದುರುದ್ದೇಶಕ್ಕೆ ಬಂಧಿಸಲಾಗಿದೆ. ಶಿವಕುಮಾರ್, ಸಮಸ್ಯೆಗಳನ್ನು ಎದುರಿಸುವ ವ್ಯಕ್ತಿ. ಓಡಿಹೋಗುವ ವ್ಯಕ್ತಿ‌ ಅಲ್ಲ.
ಅಮಾನವೀಯವಾಗಿ ಡಿಕೆಶಿ ತಾಯಿ ಮಗಳನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಧಮನಕಾರಿ ನೀತಿಯ ವಿರುದ್ಧ ಎಚ್ಚರಿಕೆ ಕೊಡಲು ಈ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.

ಕಳೆದ ಮೂರು ತಿಂಗಳಲ್ಲಿ ದೇಶದ ಬ್ಯಾಂಕುಗಳಿಂದ 32 ಸಾವಿರ ಕೋಟಿ ಹಣ ಲಪಟಾಯಿಸಲಾಗಿದೆ. ಕೈಗಾರಿಗಳ ನಾಶ, ನಿರುದ್ಯೋಗ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಕೇಂದ್ರ ಮೋದಿ ತಲೆಕೆಡಿಸಿಕೊಳ್ಳುತ್ತಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ವಿಪಕ್ಷ ಎರಡೂ ಇರಬೇಕು. ಆದರೆ ಕೇಂದ್ರ ಬಿಜೆಪಿಗೆ ವಿಪಕ್ಷವೇ ಬೇಡ. ವಿರೋಧ ಪಕ್ಷವೇ ಬೇಡ ಎನ್ನುವುದು ಯಾವ ರೀತಿಯ ರಾಜಕಾರಣ ? ಬಿಜೆಪಿಗೆ ಸೇರಿದವರಿಗೆ ಕ್ಷಮೆ ಒಳ್ಳೆಯವರೆಂಬ ಸರ್ಟಿಫಿಕೆಟ್ ಬಿಜೆಪಿ ವಿರೋಧಿಸಿದರೆ ಶಿಕ್ಷೆ ಸುಳ್ಳು ಕೇಸ್ ದಾಖಲು ಮಾಡಲಾಗುತ್ತಿದೆ. ಈಗ ಬಿಜೆಪಿಯ ವಿರುದ್ಧ ಜನರು ಎಚ್ಚೆತ್ತಿದ್ದಾರೆ. ಒಕ್ಕಲಿಗ ಸಮಾಜವಷ್ಟೇ ಅಲ್ಲ ಎಲ್ಲಾ ಸಮುದಾಯದವರು ಬಿಜೆಪಿ ವಿರುದ್ಧ ನಿಂತಿದ್ದಾರೆ. ಡಿಕೆಶಿ ಅವರ ಬೆಂಬಲಕ್ಕೆ ಎಂದಿಗೂ ಇರುವುದಾಗಿ ದಿನೇಶ್ ಗುಂಡೂರಾವ್ ಹೇಳಿದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಐಟಿ, ಸಿಬಿಐ, ಇಡಿಯಲ್ಲಿ ಬಿಜೆಪಿಯ ಸೀಳು ನಾಯಿಗಳಿದ್ದಾರೆ. ಬಿಜೆಪಿಯ ನಾಯಕರು ಹೇಡಿತನದ ರಾಜಕಾರಣ. ಚುನಾವಣಾ ರಣರಂಗದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲಾಗದೇ ವಾಮಮಾರ್ಗದ ಮೂಲಕ ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕೇವಲ ಒಕ್ಕಲಿಗ ಸಮುದಾಯದವರಷ್ಟೇ ಇಲ್ಲ. ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ಇದ್ದಾರೆ. ಡಿಕೆಶಿ ಯವರನ್ನು ರಾಜಕೀಯವಾಗಿ ಎದುರಿಸಲಾಗದೇ ಅವರನ್ನು ಬಂಧಿಸಲಾಗಿದೆ. ಶಿವಕುಮಾರ್‌ಕೇವಲ 5 ಕೋಟಿ ರೂ.ಗೆ ಮಾತ್ರ ಲೆಕ್ಕ ಕೊಡಬೇಕು. ಅದಕ್ಕೆ ಅವರು ಲೆಕ್ಕ ಕೊಡುತ್ತಾರೆ. ವಿಜಯಮಲ್ಯ ದೇಶಬಿಟ್ಟು ಓಡಿಹೋದಾಗ ಬಿಜೆಪಿಯ ನಾಯಕರು ಎಲ್ಲಿ‌ಹೋಗಿದ್ದರು ಎಂದು ಪ್ರಶ್ನಿಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಒಕ್ಕಲಿಗರೆಂದರೆ ಒಂದು ಸಮುದಾಯ ಮಾತ್ರವಲ್ಲ. ಎಲ್ಲಾ ಸಮಾಜದಲ್ಲಿಯೂ ಒಕ್ಕಲಿಗರಿದ್ದಾರೆ. ಒಕ್ಕಲುತನ ಮಾಡುವವರೆಲ್ಲರೂ ಒಕ್ಕಲಿಗರೇ.
ಅಮಿತ್‌ಷಾ ಮೋದಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಒಕ್ಕಲಿಗರು ಇಂದು ಪ್ರತಿಭಟನೆಗೆ ಇಳಿದಿದ್ದಾರೆ ಎಂದರು.

ಕರವೇ ನಾರಾಯಣಗೌಡ ಮಾತನಾಡಿ, ಪಕ್ಷ ಕೈಬಿಟ್ಟರೂ ಡಿಕೆಶಿಯವರನ್ನು ಸಮುದಾಯ ಕೈಬಿಡುವುದಿಲ್ಲ. ಸಮುದಾಯ ಇದ್ದರೆ ಮಾತ್ರ ಪಕ್ಷ, ರಾಜಕೀಯ ಎಲ್ಲವೂ‌. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿಯಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಅದಮಾಧಾನ ವ್ಯಕ್ತಪಡಿಸಿದರು.

ಶಿವಕುಮಾರ್ ಅವರಿಗೆ ನೈತಿಕ ಬಲ ನೀಡಲು ಸಮುದಾಯ ಮುಂದೆ ಬಂದಿದೆ. ಇಡೀ ಒಕ್ಕಲಿಗ ಸಮುದಾಯವೇ ಅವರ ಬೆಂಬಲಕ್ಕೆ ನಿಂತಿದೆ ಎಂದರು‌.
ಎರಡು ವರ್ಷಗಳಿಂದಲೂ ತನಿಖೆಗೆ ಸಹಕರಿಸಿದ್ದಾರಾದರೂ ಷಡ್ಯಂತ್ರದಿಂದ ಅವರನ್ನು ಬಂಧಿಸಲಾಗಿದೆ.‌ ಕಾನೂನು ಹೋರಾಟದಲ್ಲಿ ಅವರಿಗೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮಾತನಾಡಿ,
ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟ ಬಳಿಕ ಐಟಿ ದಾಳಿಯಾಗಿದೆ. ಶಿವಕುಮಾರ್ ಸಮುದಾಯದ ಪ್ರಬಲ ನಾಯಕ. ಹೀಗಾಗಿಯೇ ಅವರನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ವಿರೋಧ ಪಕ್ಷವನ್ನ ಮುಗಿಸಲು ಷಡ್ಯಂತ್ರ ರೂಪಿಸಿದೆ ಎಂದರು.

ಪ್ರತಿಭಟನೆ ವೇಳೆ ಮಾಜಿ ಶಾಸಕ ಚಲುವರಾಯಸ್ವಾಮಿ ಭಾಷಣಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಾತನ್ನು ಮೊಟಕುಗೊಳಿಸಬೇಕಾಯಿತು. ಚಲುವರಾಯಸ್ವಾಮಿಗೆ ಮಾತನಾಡಲು ಅವಕಾಶ ಕೊಡದಂತೆ ಪ್ರತಿಭಟನೆಗೆ ಆಗಮಿಸಿದ ಒಂದು ಗುಂಪಿನಿಂದ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಚೆಲುವರಾಯಸ್ವಾಮಿ ಮಾತನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಇನ್ನು ಜಯನಗರ ಅಶೋಕ ಪಿಲ್ಲರ್ ಬಳಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರ ಪರಿಣಾಮ ಬಿಎಂಟಿಸಿ ಬಸ್ಸಿನ ಗಾಜು ಪುಡಿಪುಡಿಯಾದ ಬಗ್ಗೆ ವರದಿಯಾಗಿದೆ‌. ಪ್ರತಿಭಟನೆ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಸುಮಾರು ಐದು ಸಾವಿರ ಪೊಲೀಸರ ನಿಯೋಜನೆ. ಹಲವು ಕಡೆ ಸಂಚಾರ ಮಾರ್ಗ ಬದಲಾವಣೆ. ನ್ಯಾಷನಲ್ ಕಾಲೇಜಿನಲ್ಲಿ ಭದ್ರತೆಗಾಗಿ ಅರಸೇನಾ ತುಕಡಿ ನಿಯೋಜನೆ ಮಾಡಲಾಗಿತ್ತು.

ನ್ಯಾಷನಲ್ ಕಾಲೇಜಿನಿಂದ ಸಾವಿರಾರುವಸಂಖ್ಯೆಯಲ್ಲಿ ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಧಿಕ್ಕಾರ ಕೂಗುತ್ತಾ ಸ್ವಾತಂತ್ರ್ಯ ಉದ್ಯಾನವನದತ್ತ ಹೆಜ್ಜೆಹಾಕಿದರು. ನ್ಯಾಷನಲ್ ಕಾಲೇಜಿನಿಂದ ಪಿಎಂಕೆ ರಸ್ತೆ, ವಾಣಿವಿಲಾಸ್ ರಸ್ತೆ, ಮಿನರ್ವಾ ರಸ್ತೆ, ಜೆ.ಸಿ.ರಸ್ತೆ, ಪುರಭವನ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ಮಹಾರಾಣಿ ಕಾಲೇಜು ಸೇತುವೆ ರಸ್ತೆ ಮೂಲಕ ಸ್ವಾರಂತ್ರ್ಯ ಉದ್ಯಾನವನ ಮೈದಾನದತ್ತ ಪ್ರತಿಭಟನಾ ರ‌್ಯಾಲಿ ಸಾಗಿತು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.