ಅಬ್ಬರದ ಪೈಲ್ವಾನ್‍ಗೆ ಅಭಿಮಾನಿಗಳು ಫಿದಾ

ಅಬ್ಬರದ ಪೈಲ್ವಾನ್‍ಗೆ ಅಭಿಮಾನಿಗಳು ಫಿದಾ

ಕಿಚ್ಚ ಸುದೀಪ್ ಅಭಿನಯದ ಹೈ ವೊಲ್ಟೇಜ್ ‘ಪೈಲ್ವಾನ್’ ಸಿನಿಮಾ ನಿನ್ನೆಯಷ್ಟೇ ಪ್ಯಾನ್ ಇಂಡಿಯಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಸಾಮಾನ್ಯವಾಗಿ ಕನ್ನಡದ ಸಾಕಷ್ಟು ಸಿನಿಮಾಗಳು ಶುಕ್ರವಾರ ತೆರೆಗೆ ಬರುತ್ತವೆ. ಆದರೆ ಸುದೀಪ್ ಸಿನಿಮಾಗಳು ಮಾತ್ರ ಗುರುವಾರವೇ ರಿಲೀಸ್ ಆಗುತ್ತವೆ. ಅದರಂತೆ ಪೈಲ್ವಾನ್ ಕೂಡ ಗುರುವಾರವೇ (ಸೆ. 12) ರಿಲೀಸ್ ಆಗಿದೆ. ಚಿತ್ರಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುದೀಪ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಈ ನಾಲ್ಕು ಭಾಷೆಯಲ್ಲಿ ಪೈಲ್ವಾನ್ ನಿನ್ನೆ ಬಿಡುಗಡೆಯಾದರೆ, ಹಿಂದಿ ವರ್ಷನ್ ಮಾತ್ರ ಇಂದು (ಶುಕ್ರವಾರ)ದಿಂದ ಪ್ರದರ್ಶನ ಶುರು ಆಗಲಿದೆ. ‘ಹೆಬ್ಬುಲಿ’ ಖ್ಯಾತಿಯ ಕೃಷ್ಣ ನಿರ್ದೇನ ಮಾಡಿರುವ ‘ಪೈಲ್ವಾನ್’ ಕುಸ್ತಿ ಮತ್ತು ಬಾಕ್ಸಿಂಗ್ ಅಂಶ ಒಳಗೊಂಡಿದೆ. ಇದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಸ್ಪೋಟ್ಸ್ ಸಿನಿಮಾ ಆದ್ದರಿಂದ ದೊಡ್ಡ ಮಟ್ಟದಲ್ಲಿ ಜನರಿಗೆ ಪೈಲ್ವಾನ್ ರೀಚ್ ಆಗಿದೆ. ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ರಂತಹ ಬಹುಭಾಷಾ ನಟರು ಅಭಿನಯಿಸಿರುವುದು ಕೂಡ ಸಿನಿಮಾದ ವಿಶೇಷ ಎನ್ನಬಹುದು.


ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ಕೃಷ್ಣ ‘ನಾವಂದುಕೊಂಡದ್ದಕಿಂತ ದೊಡ್ಡ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಇದೆಲ್ಲವನ್ನು ನೋಡಿದರೆ ಖುಷಿ ಯಾಗುತ್ತಿದೆ. ಇದಕ್ಕೆ ಸಾಕಷ್ಟು ಜನರ ಶ್ರಮ ಇದೆ. ಇಡಿ ಸಿನಿಮಾ ಸೆಟ್‍ನಲ್ಲಿ ಶೂಟಿಂಗ್ ಮಾಡಿರುವುದು ವಿಶೇಷ. ಪೈಲ್ವಾನ್ ಸಿನಿಮಾ ನೋಡಿ ಹೊರಗೆ ಬಂದಾಗ ಸುದೀಪ್ ಒಬ್ಬರೇ ಕಾಣುತ್ತಾರೆ. ಅಷ್ಟು ಸುಂದರವಾಗಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಈ ಚಿತ್ರಕ್ಕೆ ಸುದೀಪ್ ಬ್ಯಾಕ್ ಬೋನ್ ಸಹ ಆಗಿದ್ದು, ಎಲ್ಲಾಕಡೆ ಚಿತ್ರದ ಬಗ್ಗೆ ಪಾಸಿಟಿವ್ ವೈಬರೆಷನ್ ಇದೆ’ ಎನ್ನುವರು. ಇನ್ನು ನಿರ್ಮಾಪಕಿ ಸ್ವಪ್ನ ಕೃಷ್ಣ ‘ಇದು ನಮಗೆ ತುಂಬಾ ದೊಡ್ಡ ಘಟ್ಟ. ಕನಸಿನಲ್ಲೂ ಸಿನಿಮಾ ನಿರ್ಮಾಣ ಮಾಡುವುದು ಇಷ್ಟು ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವುದನ್ನು ಯೋಚಿಸಿರಲಿಲ್ಲ. ನಾವು 30 ರೂ ಜ್ಯೂಸ್ ಕುಡಿಯಲು ಹಿಂದೆ ಮುಂದೆ ನೋಡುತಿದ್ದೆವು. ಇಂದು ಈ ಮಟ್ಟಕ್ಕೆ ಬಂದಿದ್ದೇವೆ ಎಂದರೆ, ಸುದೀಪ್ ಕಾರಣ. ಅವರು ಧೈರ್ಯ ತುಂಬಿದ್ದರಿಂದಲೇ ಇಲ್ಲಿಯ ವರೆಗೆ ಬಂದಿದ್ದೇವೆ’ ಎನ್ನುವರು.
ಮೊನ್ನೆ ನಡೆದ ಪೈಲ್ವಾನ್ ಬಿಡುಗಡೆ ಪೂರ್ವ ಪ್ರತಿಕಾಗೊಷ್ಟಿಯಲ್ಲಿ ಸುದೀಪ್ ‘ಕನಸಲ್ಲು ಈ ತರ ಪಾತ್ರ ಮಾಡುವ ಯೋಚನೆ ಮಾಡಿರಲಿಲ್ಲ. ನಾನು ಕೂಡ ಸಿನಿಮಾಗಾಗಿ ನಿರೀಕ್ಷೆಯಿಂದ ಕಾಯ್ತಾ ಇದ್ದೇನೆ. ಇಂತ ಸಿನಿಮಾ ಮಾಡುವಾಗ ತಯಾರಿ ತುಂಬಾ ಬೆಕಾಗುತ್ತದೆ. ಪೈಲ್ವಾನ್‍ಗಾಗಿ ಸಾಕಷ್ಟು ತಯಾರಿ ಮಾಡಿಕೊಂಡೆ. ಡಬ್ಬಿಂಗ್ ಮಾಡುವಾಗ ನನ್ನನೆ ನಾನು ಸ್ಕ್ರೀನ್ ಮೇಲೆ ನೋಡಿ ಖುಷಿ ಪಟ್ಟೆ. ಐದು ಭಾಷೆಗಳ ಪೈಕಿ ಮಲಯಾಳಂ ಬಿಟ್ಟು ಎಲ್ಲಕ್ಕೂ ನಾನೇ ಡಬಿಂಗ್ ಮಾಡಿದ್ದೇನೆ. ಬಾಲಿವುಡ್‍ನಲ್ಲಿ ಪ್ರಚಾರಕ್ಕೆಂದು ಹೋದಾಗ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸುನೀಲ್ ಶೆಟ್ಟಿ ಅವರ ಜೊತೆ ಕಳೆದ ಕ್ಷಣ ಮರೆಯಲಾಗದು’ ಎನ್ನುವರು.

ಇದೇ ಸಂದರ್ಭದಲ್ಲಿ ಚಿತ್ರದ ಟ್ರೇಲರ್ ಹಾಗೂ ತುಣುಕುಗಳನ್ನು ನೋಡಿದ ನಟ ವಿ. ರವಿಚಂದ್ರನ್ ‘ನಾನು ಕುರುಕ್ಷೇತ್ರದಲ್ಲಿ ಕೃಷ್ಣನ ಪಾತ್ರ ಮಾಡಿ ಗೆದ್ದೆ. ಇದನ್ನು ಕೃಷ್ಣ ನಿರ್ದೇಶನ ಮಾಡಿದ್ದಾರೆ. ಇದು ಗೆಲ್ಲುತ್ತದೆ. ಚಿತ್ರದಲ್ಲಿ ಬೆಂಕಿ ಕಾಣಿಸ್ತಾ ಇದೆ. ಸುದೀಪ್ ಪೈಲ್ವಾನ್ ಮಾಡೋದಾ ಎಂದು ಉಹಿಸಲು ಸಾದ್ಯವಿಲ್ಲ. ಅವರು ಪಾತ್ರಕ್ಕಾಗಿ ಶ್ರಮ ಹಾಕಿದ್ದು ಕಾಣುತ್ತದೆ. ಅದಕ್ಕೆ ಫಲ ಸಿಕ್ಕೆ ಸಿಗುತ್ತದೆ. ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಈ ಚಿತ್ರದ ಕ್ರೇಜ್ ನೋಡಿದರೆ ತಿಳಿಯುತ್ತದೆ. ಇಂದು ಇಂಡಿಯಾದಲ್ಲಿ ನಮ್ಮ ಚಿತ್ರದ ಬಗ್ಗೆ ಕುತೂಹಲದಿಂದ ಕಾಯ್ತಾ ಇದ್ದಾರೆ. ನಾವು ಕೂಡ ಬಾಕ್ಸ್ ಆಫಿಸಿನಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಬಹುದು ಎಂಬುದನ್ನು ಹಿಂದಿನ ಚಿತ್ರಗಳು ತೋರಿಸಿ ಕೊಟ್ಟಿವೆ. ನಾವು 5 ಅಡಿ ಇದ್ದವರು ಚಿತ್ರರಂಗವನ್ನು ಒಂದು ಹಂತಕ್ಕೆ ಒಯ್ದರೆ, ಇಂದು 6 ಅಡಿಯವರು ಇದೊಂದು ಹಂತಕ್ಕೆ ಒಯುತ್ತಾ ಇದ್ದಾರೆ’ ಎಂದರು.

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರು ಈ ಚಿತ್ರವನ್ನು ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಸ್ವಪ್ನ ಕೃಷ್ಣ ಅವರು ನಿರ್ಮಿಸಿದ್ದಾರೆ. ಎಸ್.ದೇವರಾಜ್ ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಈ ಚಿತ್ರಕ್ಕೆ ಕೃಷ್ಣ, ಡಿ.ಎಸ್.ಕಣ್ಣನ್ ಹಾಗೂ ಜೆ.ವಿ.ಮಧುಕಿ ರಣ್ ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ಕೃಷ್ಣ ಹಾಗೂ ಡಿ.ಎಸ್.ಕಣ್ಣನ್ ಸಂಭಾಷಣೆ ಬರೆದಿದ್ದು, ಕರುಣಾಕರ್ ಅವರ ಛಾಯಾಗ್ರಹಣ, ರುಬೆನ್ ಸಂಕಲನ, ಗಣೇಶ್ ಆಚಾರ್ಯ, ರಾಜು ಸುಂದರಂ, ಹರ್ಷ ನೃತ್ಯ ನಿರ್ದೇಶನ ಹಾಗೂ ರಾಮ್ – ಲಕ್ಷ್ಮಣ್ ಸಾಹಸ ನಿರ್ದೇಶನವಿದೆ. ಇನ್ನು ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ಅಭಿನಸಿದ್ದು, ಇವರಿಗಿದು ಮೊದಲ ಸಿನಿಮಾ. ಉಳಿದ ತಾರಾಗಣದಲ್ಲಿ ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್, ಅಪ್ಪಣ್ಣ ಮುಂತಾದವರು ಇದ್ದಾರೆ.

ಅತಿ ಹೆಚ್ಚು ಥಿಯೇಟರ್‍ನಲ್ಲಿ ಪೈಲ್ವಾನ್ ದರ್ಬಾರ್
‘ಪೈಲ್ವಾನ್ ಸಿನಿಮಾ ಅಂದುಕೊಂಡಂತೆ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಸುಮಾರು 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್ ರಿಲೀಸ್ ಆಗಿದ್ದು, ಎಷ್ಟೋ ಕಡೆ ಬಂದ ಆದ ಥಿಯೇಟರ್‍ಗಳು ಈ ಚಿತ್ರದಿಂದ ರೀ ಓಪನ್ ಆಗಿವೆ. ಆಂದ್ರ ತೆಲಂಗಾನದಲ್ಲಿ ತೆಲುಗು ಭಾಷೆಯ ಸಿನಿಮಾ 400 ಪ್ಲಸ್ ಮತ್ತು ತಮಿಳುನಾಡಿನಲ್ಲಿ ತಮಿಳು ವರ್ಷನ್ 300 ಕ್ಕೂ ಹೆಚ್ಚು ಸ್ಕ್ರೀನ್‍ಗಳು ಪೈಲ್ವಾನ್ ಪಾಲಾಗಿವೆ. ಜೊತೆಗೆ ಮಲಯಾಳಂನಲ್ಲಿ 40ಕ್ಕೂ ಹೆಚ್ಚು ಚಿತ್ರಮಂದಿರಗಳ ವ್ಯವಸ್ಥೆ ಆಗಿದೆ. ಇನ್ನು ದೇಶಾದ್ಯಂತ ಅತಿ ಹೆಚ್ಚು ಎನ್ನುವಂತೆ 2,000 ಪ್ಲಸ್ ಥಿಯೇಟರ್‍ಗಳಲ್ಲಿ ಹಿಂದಿ ವರ್ಷನ್‍ನ ಪೈಲ್ವಾನ್ ತೆರೆಗೆ ಬರಲಿದೆ. ಅಲ್ಲದೆ ಯುರೋಪ್, ರಷ್ಯ, ಯು.ಎಸ್.ಎ ದುಬೈ ಮುಂತಾದ ಹೊರ ರಾಷ್ಟ್ರಗಳಲ್ಲಿ ಸುಮಾರು 65 ಸೆಂಟರ್‍ಗಳಲ್ಲಿ ಪೈಲ್ವಾನ್ ರಿಲೀಸ್ ಆಗಿದೆ’ ಎಂದು ವಿತರಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಮಾಹಿತಿ ನೀಡುವರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.