ಅನರ್ಹ ಶಾಸಕರಿಗೆ ಮತ್ತೆ ಹಿನ್ನಡೆ:  ವಿಚಾರಣೆಗೆ ಸುಪ್ರೀಂ ನಕಾರ

ಅನರ್ಹ ಶಾಸಕರಿಗೆ ಮತ್ತೆ ಹಿನ್ನಡೆ: ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ:ರಾಜ್ಯದ 17 ಮಂದಿ ಅನರ್ಹ ಶಾಸಕರಿಗೆ ಮತ್ತೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆಯಾಗಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ತಾವು ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.

ತಮ್ಮ ಶಾಸಕತ್ವ ಅನರ್ಹತೆ ಪ್ರಶ್ನಿಸಿ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ 17 ಶಾಸಕರು ಹಿರಿಯ ವಕೀಲರ ಮೂಲಕ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

‘ಈ ಅರ್ಜಿ ನಿಗದಿತ ಪಟ್ಟಿಯಲ್ಲಿ ಬರಲಿದೆ. ಈ ವಿಷಯದಲ್ಲಿ ತುರ್ತು ಏಕೆ. ಸರಿಯಾದ ಸಮಯಕ್ಕೆ ನಾವು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠವು ಹೇಳಿದೆ.

ಕರ್ನಾಟಕದ ಅನರ್ಹ 17 ಶಾಸಕರ ಅರ್ಜಿಯನ್ನು ತ್ವರಿತ ವಿಚಾರಣೆ ನಡೆಸುವಂತೆ ಮನವಿ ಮಾಡಿದ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ, ವಿ ಗಿರಿ ಮತ್ತು ಅನುಪಮ್ ಲಾಲ್ ದಾಸ್ ಅವರಿಗೆ ನ್ಯಾಯಾಲಯ ಈ ರೀತಿ ಹೇಳಿದೆ.

ಒಮ್ಮೆ ಅರ್ಜಿ ಪಟ್ಟಿಯಲ್ಲಿತ್ತು. ಆದರೆ ಬಳಿಕ ಅದನ್ನು ತೆಗೆದುಹಾಕಲಾಗಿದೆ ಎಂದು ವಕೀಲರು ಪೀಠದ ಗಮನಕ್ಕೆ ತಂದರು.

ಆದರೆ ಕರ್ನಾಟಕದ ಅನರ್ಹ 17 ಶಾಸಕರು ಸಲ್ಲಿಸಿದ ಅರ್ಜಿಯನ್ನು ಪಟ್ಟಿಗೆ ಸೇರಿಸುವ ಸಂಬಂಧ ಯಾವುದೇ ಆದೇಶ ಹೊರಡಿಸಲು ನ್ಯಾಯಮೂರ್ತಿ ರಮಣ ನಿರಾಕರಿಸಿದರು.

ಹಿರಿಯ ವಕೀಲ ದ್ವಿವೇದಿ ಸೆಪ್ಟೆಂಬರ್ 16ರ ಪಟ್ಟಿಯಿಂದ ಅರ್ಜಿಯನ್ನು ತೆಗೆದುಹಾಕಿರುವುದರ ವಿರುದ್ಧ ಆದೇಶ ನೀಡುವಂತೆ ಉನ್ನತ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ನ್ಯಾಯಾಲಯ ಯಾವುದೇ ಆದೇಶ ನೀಡದೆ ಈ ಅರ್ಜಿಯು ನಿಗದಿತ ಪಟ್ಟಿಯ ಮೂಲಕವೇ ವಿಚಾರಣೆಗೆ ಬರಲಿ ಎಂದು ಹೇಳಿದೆ. ಇದರೊಂದಿಗೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಬೇಕೇಂಬ ಮಹತ್ವಾಕಾಂಕ್ಷೆಯಲ್ಲಿರುವ ಅನರ್ಹ ಶಾಸಕರ ಆಸೆಗೆ ತಣ್ಣೀರೆರಚಿದಂತಾಗಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.