ಬಳ್ಳಾರಿಯ ನಕ್ಷತ್ರ ಹೊಟೇಲ್ ಮೇಲೆ ಐಟಿ ದಾಳಿ!

ಬೆಳಗಾಯಿತು ವಾರ್ತೆ 

ಬಳ್ಳಾರಿ: ಬಳ್ಳಾರಿ ನಗರದ ಮೋಕಾ ರಸ್ತೆಯಲ್ಲಿರುವ ನಕ್ಷತ್ರ ಪಂಚತಾರಾ ಹೊಟೇಲ್ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಮುಖಂಡರು ತಂಗಿದ್ದ ಈ ಹೋಟೆಲ್‍ನಲ್ಲಿ ಅನಿಲ್ ಲಾಡ್ ಹಾಗೂ ದೇವೇಂದ್ರಪ್ಪ ನವರ ರೂಮ್‍ನ್ನು ಐಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು, ಬಳ್ಳಾರಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳುಳ್ಳ ತಂಡವು ತಮಗೆ ಬಂದ ಮಾಹಿತಿಯ ಆಧಾರದ ಮೇಲೆ, ಮಂಗಳವಾರ ರಾತ್ರಿಯಿಂದಲೇ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿ ಅದು ಬುಧವಾರ ನಸುಕಿನ ಜಾವದವರೆಗೆ ಮುಂದುವರಿಯಿತು.

ಮತದಾರರಿಗೆ ಹಂಚಲೆಂದು ಹೊಟೇಲ್ ರೂಂನಲ್ಲಿ ನಗದು ತಂದಿರಿಸಲಾಗಿತ್ತು ಎಂಬ ಸಂಶಯದ ಮೇಲೆ ಐಟಿ ಅಧಿಕಾರಿಗಳು ಹೊಟೇಲ್ ರೂಂನ ಎಲ್ಲಾ ಕೋಣೆಯಲ್ಲಿ ಶೋಧ ನಡೆಸಿದ್ದಾರೆ. 6 ಜನ ಅಧಿಕಾರಿಗಳ ತಂಡ ತಮ್ಮ ಶೋಧ ಕಾರ್ಯ ಮುಗಿಯುವವರೆಗೆ ಹೊಟೇಲ್ ರೂಂನೊಳಗೆ ಯಾರನ್ನೂ ಬಿಡಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಈ ಹೊಟೇಲ್ ನ ಮುಖ್ಯದ್ವಾರವನ್ನ ಸಂಪೂರ್ಣವಾಗಿ ಬಂದ್ ಮಾಡಿದ ಐಟಿ ಅಧಿಕಾರಿಗಳು ಯಾರನ್ನು ಒಳಬಿಡದಂತೆ ಹೊಟೇಲ್ ಸಿಬ್ಬಂದಿಗೆ ತಾಕೀತು ಮಾಡಿ, ತಪಾಸಣೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ದೇವೆಂದ್ರಪ್ಪ ಅವರು ಐಟಿ ಅಧಿಕಾರಿಗಳ ಸೂಚನೆಯ ಮೇರೆಗೆ ಹೊಟೇಲ್ ಹೊರಗೆ ಬಂದು ಕಾರನ್ನ ಹತ್ತಿ ಬೇರೆಡೆಗೆ ತೆರಳಿದ್ದಾರೆ. ಕಳೆದ ಉಪಚುನಾವಣೆಯಲ್ಲೂ ಈ ಹೊಟೇಲ್ ನಲ್ಲಿ ಪ್ರಮುಖ ರಾಜಕೀಯ ಪಕ್ಷದ ನಾಯಕರು ಹೆಚ್ಚಾಗಿ ತಂಗಿದ್ದರು.

 

ಅನಿಲ್ ಲಾಡ್ ಮನೆ ಮೇಲೆ ದಾಳಿ
ಐಟಿ ಅಧಿಕಾರಿಗಳು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಅವರ ಬಳ್ಳಾರಿ ನಿವಾಸದ ಮೇಲೆ ಕೂಡ ದಾಳಿ ನಡೆಸಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಲಾಡ್, ಐಟಿ ಅಧಿಕಾರಿಗಳು ತಮ್ಮ ನಿವಾಸದ ಮೇಲೆ ನಡೆದ ದಾಳಿಯನ್ನು ಖಚಿತಪಡಿಸಿದ್ದಾರೆ.ಪಕ್ಷದ ಕಾರ್ಯಕರ್ತರ ಸಭೆ ಮುಗಿಸಿ ಈಗ ತಾನೇ ಬೆಂಗಳೂರಿನಿಂದ ಬಂದಿದ್ದೇನೆ. ಐಟಿ ಇಲಾಖೆ ತಮ್ಮ ಮನೆಗೆ ಬಂದಿದ್ದು ಮನೆಯಲ್ಲಿ ಹಣ ಸಂಗ್ರಹಿಸಿಟ್ಟ ಮಾಹಿತಿ ಸಿಕ್ಕಿ ಶೋಧ ನಡೆಸಿದ್ದಾರೆ. 10 ಮಂದಿ ಅಧಿಕಾರಿಗಳ ತಂಡ ಮನೆಗೆ ಬಂದಿದ್ದರು ಎಂದರು.ತಮ್ಮ ಬಗ್ಗೆ ವಿರೋಧ ಪಕ್ಷದವರು ತಪ್ಪು ಮಾಹಿತಿ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅನಿಲ್ ಲಾಡ್ ಆರೋಪಿಸಿದರು.

 

ದೇವೇಂದ್ರಪ್ಪನವರ ಕೊಠಡಿ ಕೂಡಾ ತಪಾಸಣೆ
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಹಾಗೂ ಅವರ ಬೆಂಬಲಿಗರು ಈ ಪಂಚತಾರಾ ಹೊಟೇಲ್ ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ.
ಮಂಗಳವಾರ ತಡರಾತ್ರಿ ಹೊಟೇಲ್ ನ ಕೊಠಡಿಯೊಂದರಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರು ಪ್ರಚಾರ ಕಾರ್ಯ ಮುಗಿಸಿಕೊಂಡು ಬಂದು ವಿಶ್ರಾಂತಿ ಪಡೆಯುತ್ತಿರುವಾಗ ದಿಢೀರನೆ ಐದಾರು ಮಂದಿ ಅಧಿಕಾರಿಗಳ ತಂಡವು ದೇವೇಂದ್ರಪ್ಪನವರ ಕೊಠಡಿಗೆ ಭೇಟಿ ನೀಡಿ, ಹೊರ ನಡೆಯುವಂತೆ ಸೂಚಿಸಿ, ತಪಾಸಣೆ ಕಾರ್ಯ ನಡೆಸಿದ್ದಾರೆ.

Leave a Reply

Your email address will not be published. Required fields are marked *