ಸರಕಾರಿ ಆಸ್ಪತ್ರೆಗೆ ಬನ್ನಿ ಮಕ್ಕಳಿಗೆ ರೋಟಾ ವೈರಸ್ ಲಸಿಕೆ ಹಾಕಿಸಿ: ಸಚಿವ ಶ್ರೀರಾಮುಲು

Share on facebook
Share on twitter
Share on linkedin
Share on whatsapp
Share on email

ರೋಟಾ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಚಾಲನೆ

ಬಳ್ಳಾರಿ: ಮಕ್ಕಳಲ್ಲಿ ಕಂಡುಬರುವ ರೋಟಾ ವೈರಸ್ ಅತಿಸಾರ ಬೇಧಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ರೋಟಾ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ಮಕ್ಕಳು ಆರೋಗ್ಯವಂತ ಮಕ್ಕಳಬಾಗಬೇಕು. ಈ ಮೂಲಕ ಸದೃಢ ಭಾರತ ನಿರ್ಮಾಣವಾಗಬೇಕು ಎಂಬ ಆಶಯದಿಂದ ಹಾಗೂ ಆರೋಗ್ಯಕ್ಕಾಗಿ ಆದ್ಯತೆ ನೀಡಿದ್ದಾರೆ. ಈ ಮುಂಚೆ ಮಕ್ಕಳಿಗೆ ಬರುವ ವಿವಿಧ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಲಾಗುತ್ತಿತ್ತು. ರೋಟಾ ವೈರಸ್ ಲಸಿಕೆಯನ್ನು ನಾಲ್ಕೈದು ಸಾವಿರ ರೂ.ಗಳು ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಕಿಸಬೇಕಾಗಿತ್ತು. ಇನ್ಮುಂದೆ ಸರಕಾರಿ ಆಸ್ಪತ್ರೆಗಳಲ್ಲಿಯೂ ಈ ಲಸಿಕೆ ನೀಡಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ರೋಟಾ ಲಸಿಕೆ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಧಾನ ಮಂತ್ರಿಗಳು ಭಾರತವನ್ನು ರೋಟಾ ವೈರಸ್ ನಿಂದ ಮುಕ್ತಗೊಳಿಸಬೇಕೆಂದು ಪಣತೊಟ್ಟಿದ್ದಾರೆ. ಅದಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಮಗುವಿನ 6 ವಾರ, 10 ವಾರ ಮತ್ತು 14ನೇ ವಾರದ ವಯಸ್ಸಿನಲ್ಲಿ ಲಸಿಕೆಯನ್ನು ಬಾಯಿಮೂಲಕ 2.5 ಮಿಲಿ ಪ್ರಮಾಣದಲ್ಲಿ ತರಬೇತಿ ಪಡೆದ ಆರೋಗ್ಯ ಇಲಾಖೆಯ ಸಿಬ್ಬಂದಿ ಮೂಲಕ ಹಾಕಿಸಲಾಗುತ್ತದೆ ಎಂದರು. 

ನಮ್ಮ ಸರಕಾರ ಎಲ್ಲ ಬಡವರಿಗೆ ಆರೋಗ್ಯ ಕಾಪಾಡುವ ಕೆಲಸವನ್ನು ಮಾಡಲಿದೆ ಎಂದರು. ಸರಕಾರಿ ಆಸ್ಪತ್ರೆಗಳಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಸಿಬ್ಬಂದಿಗಳ ಬೇಡಿಕೆ ಈಡೇರಿಸುವುದಕ್ಕೆ ನಮ್ಮ ಸರಕಾರ ಬದ್ಧವಾಗಿದ್ದು, ಈಗಾಗಲೇ ವಿಜಯಪುರ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದರು.

ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ 24 ಗಂಟೆಯೂ ಊಟದ ವ್ಯವಸ್ಥೆ ಹಾಗೂ ಅವರೊಂದಿಗೆ ಆಸ್ಪತ್ರೆಗೆ ಆಗಮಿಸುವವರಿಗೆ ತಂಗಲು ಆಸ್ಪತ್ರೆ ಬಳಿ ಶೆಲ್ಟರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕ್ಯಾಂಟಿನ್ ಆರಂಭಿಸಿ ಊಟದ ವ್ಯವಸ್ಥೆಯನ್ನು ಸರಕಾರದ ವತಿಯಿಂದಲೇ ನೀಡಬೇಕೇ ಅಥವಾ ರಿಯಾಯ್ತಿ ದರದಲ್ಲಿ ಕೊಡಬೇಕೇ ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. ಸರಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ ಜೊತೆಗೆ ಸ್ನಾನಗೃಹ ನಿರ್ಮಿಸಲಾಗುವುದು ಮತ್ತು ಬಿಸಿನಿರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದರು.

ಔಷಧಕ್ಕಾಗಿ ಹೊರಚೀಟಿ ಬರೆದ್ರೆ ಸಹಾಯವಾಣಿಗೆ ದೂರು ನೀಡಿ:

ಎಲ್ಲ ರೀತಿಯ ಲಸಿಕೆಗಳು ಹಾಗೂ ಔಷಧಿಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿಯೇ ಲಭ್ಯವಾಗುವಂತೆ ನಮ್ಮ ಸರಕಾರ ವ್ಯವಸ್ಥೆ ಮಾಡಿದ್ದು, ವೈದ್ಯರೇನಾದರೂ ಔಷಧಗಳಿಗೆ ಹೊರಚೀಟಿ ಬರೆದುಕೊಟ್ಟು ಹೊರಗಡೆಯಿಂದ ತೆಗೆದುಕೊಂಡು ಬನ್ನಿ ಅಂತ ಹೇಳಿದ್ರೇ ಸಹಾಯವಾಣಿಗೆ ದೂರು ನೀಡಿ ಎಂದು ಸಚಿವ ಶ್ರೀರಾಮುಲು ಹೇಳಿದರು.

ಸಹಾಯ ವಾಣಿಯನ್ನು ಇನ್ನೂ ಕೆಲದಿನಗಳಲ್ಲಿ ಆರಂಭಿಸಲಾಗುತ್ತದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಸಚಿವ ರಾಮುಲು ಅವರು ಬೇರೆ ಔಷಧಿಗಳು ಬೇಕಿದ್ದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಮಳಿಗೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಪಡೆಯಬಹುದು ಎಂದರು.

ಆಸ್ಪತ್ರೆಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈ ನಿಯಮಗಳನ್ನು ಉಲ್ಲಂಘಿಸುವ ಗುತ್ತಿಗೆದಾರರ ಗುತ್ತಿಗೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಡಿಎಚ್‍ಒಗಳಿಗೆ ಸೂಚಿಸಲಾಗಿದೆ ಎಂದರು.

ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಬಳ್ಳಾರಿಯ ಕೌಲ್ ಬಜಾರ್ ಬಳಿಯ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯನ್ನು 3 ತಿಂಗಳೊಳಗೆ ಆರಂಭಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಕುರಿತು ಹೆಚ್ಚಿನ ಪ್ರಚಾರವನ್ನು ಜಿಲ್ಲಾಧಿಕಾರಿಗಳು ಮಾಡಬೇಕು. ಅದು ಬಳ್ಳಾರಿಯಿಂದಲೇ ಆರಂಭವಾಗಲಿ ಎಂದು ಸೂಚಿಸಿದರು.

ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸಂಸದ ವೈ.ದೇವೇಂದ್ರಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ್, ಮಾಜಿ ಸಂಸದ ಎಸ್.ಫಕೀರಪ್ಪ, ಆರೋಗ್ಯ ಸುರಕ್ಷತಾ ಸಮಿತಿಯ ಲಕ್ಷ್ಮಣ, ರೇಹನಾ ಬೇಗಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಹೆಡೆ, ಜಿಲ್ಲಾಸ್ಪತ್ರೆಯ ಸರ್ಜನ್ ಬಸರೆಡ್ಡಿ, ಮುಖಂಡರಾದ ಮಹಿಪಾಲರೆಡ್ಡಿ, ಡಾ.ಬಿ.ಕೆ.ಸುಂದರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಗುರುನಾಥ ಚವ್ಹಾಣ, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಆರ್.ಅನಿಲಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter