ಗೀತಾಗೆ ಸಿಕ್ಕಿತು ಯು/ಎ ಸೆಪ್ಟೆಂಬರ್ 27ಕ್ಕೆ ಸಿನಿಮಾ ರಿಲೀಸ್

ಗೀತಾಗೆ ಸಿಕ್ಕಿತು ಯು/ಎ ಸೆಪ್ಟೆಂಬರ್ 27ಕ್ಕೆ ಸಿನಿಮಾ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಸಿನಿಮಾ ಸದ್ಯ ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಗಣೇಶ್ ಅವರ ಬಹು ನಿರೀಕ್ಷೆಯ ‘ಗೀತಾ’ ಚಿತ್ರ ಇದೇ ಸೆಪ್ಟಂಬರ್ 27ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಎಸ್.ಎಸ್.ಫಿಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ಅವರುಗಳು ಗೀತಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ಚಿತ್ರದ ಪವರ್‍ಫುಲ್ ಹಾಡೊಂದನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದಾರೆ. ಹೌದು, “ಗೀತಾ’ ಚಿತ್ರಕ್ಕಾಗಿ ಸಂತೋಷ್ ಆನಂದರಾಮ್ ಅವರು ಬರೆದ “ಕನ್ನಡ ಕನ್ನಡ ಕನ್ನಡ ಕನ್ನಡವೇ ಸತ್ಯ, ಕನ್ನಡ ಕನ್ನಡ ಕನ್ನಡ ಕನ್ನಡವೇ ನಿತ್ಯ..’ ಎಂಬ ಹಾಡಿಗೆ ಪುನೀತ್ ಧ್ವನಿಯಾಗಿದ್ದಾರೆ. ಅನೂಪ್ ರೂಬಿನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ಈಗಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪುನೀತ್ ರಾಜಕುಮಾರ್ ಅವರು ಗಣೇಶ್ ಅವರಿಗೆ ಹಾಡಿರುವ ಮೂರನೇ ಹಾಡು ಇದು. ಈ ಹಿಂದೆ ಪುನೀತ್ “ಶೈಲೂ’ ಚಿತ್ರದಲ್ಲಿ ಹಾಡಿದ್ದರು. ಅದಾದ ಬಳಿಕ “ಜೂಮ್’ ಚಿತ್ರದಲ್ಲೂ “ರಾಜಾಧಿರಾಜ ರಾಜ ಮಾತಾರ್ಂಡ …’ ಎಂಬ ಹಾಡು ಹಾಡಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು. ಈಗ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ “ಗೀತಾ’ ಚಿತ್ರಕ್ಕೆ “ಕನ್ನಡ ಕಂಪು’ ಸೂಸುವ ಹಾಡನ್ನು ಹಾಡಿದ್ದಾರೆ. ವಿಶೇಷವೆಂದರೆ, ಚಿತ್ರದಲ್ಲೂ ಗಣೇಶ್ ಅವರು ಅಪ್ಪಟ ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಗೋಕಾಕ್ ಚಳವಳಿಯ ವಿಶೇಷತೆ ಕೂಡ ಇದರಲ್ಲಿದೆ. “ಪುನೀತ್ ರಾಜಕುಮಾರ್ ಹಾಡಿರುವ ಹೈ ವೋಲ್ಟೆಜ್ ಹಾಡು ಇದು ಎನ್ನುವ ಗಣೇಶ್, ನನ್ನ ಸಿನಿಮಾಗಳಲ್ಲಿ ಪುನೀತ್ ಹಾಡಿರುವ ಹಾಡುಗಳು ಹಿಟ್ ಆಗಿವೆ. ಈ ಹಾಡು ಕೂಡ ಅದೇ ಲಿಸ್ಟ್‍ಗೆ ಸೇರಲಿದೆ. ಕನ್ನಡಿಗರಿಗೆ ಈ ಹಾಡು ಖಂಡಿತವಾಗಿಯೂ ರುಚಿಸಲಿದೆ’ ಎನ್ನುವರು.

“ಗೀತಾ’ ಶಂಕರ್‍ನಾಗ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದಲ್ಲಿ ಗಣೇಶ್ ಅವರು ಶಂಕರ್‍ನಾಗ್ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಚಿತ್ರದ ಫಸ್ಟ್‍ಲುಕ್‍ನಲ್ಲಿ ಗಣೇಶ್ ಅವರು ಹಾಕಿಕೊಂಡಿರುವ ಕ್ಯಾಪ್, ಗಡ್ಡ ಎಲ್ಲವೂ ಶಂಕರ್‍ನಾಗ್ ಅವರನ್ನು ಹೋಲುವಂತಿದೆ. ಜೊತೆಗೆ ಶರ್ಟ್ ಮೇಲೆ ಕನ್ನಡದ ಬಾವುಟದ ಸಂಕೇತವಿದೆ. ಅಂದಂಗೆ ಈ ಚಿತ್ರವನ್ನು ಮಿಸ್ಟರ್ & ಮಿಸ್ಸಸ್ ರಾಮಾಚಾರಿ’ ಹಾಗೂರಾಜಕುಮಾರ’ ಚಿತ್ರಗಳಿಗೆ ಸಂತೋಷ್ ಆನಂದರಾಮ್ ಅವರ ಜೊತೆ ಕಾರ್ಯ ನಿರ್ವಹಿಸಿ ಅನುಭವವಿರುವ ವಿಜಯ್ ನಾಗೇಂದ್ರ ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಾಗೇಂದ್ರ ಬಿ.ಎಂ ಸಂಭಾಷಣೆ ಬರೆದಿದ್ದಾರೆ.

ಆರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ಬಿ ಮಠದ್ ಸಂಕಲನ, ಶಿವಕುಮಾರ್, ವಿಶ್ವಾಸ್ ಕಶ್ಯಪ್ ಕಲಾ ನಿರ್ದೆಶನ, ವಿಜಯ್ ಮಾಸ್ಟರ್ ಹಾಗೂ ವಿನೋದ್ ಸಾಹಸ ನಿರ್ದೇಶನ ಮತ್ತು ಭೂಷಣ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಗಣೇಶ್ ಅವರಿಗೆ ನಾಯಕಿಯರಾಗಿ ಕೇರಳದ ಪಾರ್ವತಿ ಅರುಣ್, ಪ್ರಯಾಗ ಮಾಲ್ಟಿನ್ ಹಾಗೂ ಶಾನ್ವಿ ಶ್ರೀವಾಸ್ತವ್ ಅಭಿನಯಿಸಿದ್ದಾರೆ. ಸುಧಾರಾಣಿ, ದೇವರಾಜ್, ರಂಗಾಯಣ ರಘು, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.