ದೇವೇಂದ್ರಪ್ಪ ಗೆಲವು ಖಚಿತ: ಶ್ರೀರಾಮುಲು

ಬೆಳಗಾಯಿತು ವಾರ್ತೆ

ಬಳ್ಳಾರಿ: ಕರ್ನಾಟಕದ 21 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಬಿಜೆಪಿ

ಅಭ್ಯರ್ಥಿಗಳನ್ನ ಘೋಷಿಸಲಾಗಿದ್ದು, ಬಳ್ಳಾರಿಯಿಂದ ವೈ .ದೇವೇಂದ್ರಪ್ಪ

ಅವರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ದೇವೇಂದ್ರಪ್ಪ

ಅವರನ್ನುಹೆಚ್ಚಿನ ಅಂತರದಿಂದ ಗೆಲ್ಲಿಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ

ಎಂದು ಶ್ರೀರಾಮುಲು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ

ಗೆಲುವಿಗಾಗಿ ಎಲ್ಲರೂ ಸಿದ್ಧರಾಗಿದ್ದೇವೆ. ಪಕ್ಷದೊಳಗೆ ಯಾವುದೇ

ಭಿನ್ನಾಭಿಪ್ರಾಯವಿಲ್ಲ. ಈ ಬಾರಿ ಬಳ್ಳಾರಿಯಲ್ಲಿ ಗೆಲ್ಲಲು ನಾವು ಕಾಯಾ ವಾಚಾ

ಮನಸಾ ದುಡಿತೀವಿ. ವೈ.ದೇವೇಂದ್ರಪ್ಪ ಅವರನ್ನು 1 ಲಕ್ಷ ಮತದ ಅಂತರದಲ್ಲಿ

ಗೆಲ್ಲಿಸಿಕೊಳ್ಳುತ್ತೇವೆ ಎಂಬ ವಿಶ್ವಾಸದ ಮಾತನ್ನಾಡಿದರು.

ಏಪ್ರಿಲ್ 1ರಂದು ನಾಮಪತ್ರ

ಏಪ್ರಿಲ್ 1ರಂದು ದೇವೇಂದ್ರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಅಭ್ಯರ್ಥಿಯಾಗಿ

ದೇವೇಂದ್ರಪ್ಪ ಅವರ ಆಯ್ಕೆ ಮುಖಂಡರ ಒಮ್ಮತದ ತೀರ್ಮಾನ. ಕಳೆದ

ಉಪಚುನಾವಣೆಯಲ್ಲಿ 2.41 ಲಕ್ಷ ಮತಗಳ ಅಂತರದಲ್ಲಿ ಪಕ್ಷ ಸೋತಿದೆ ನಿಜ.

ಆದರೇ ಆಗಿನ ಪರಿಸ್ಥಿತಿ ಬೇರೆ. ಈ ಬಾರಿ ಡಿ.ಕೆ.ಶಿವಕುಮಾರ್ ತಂತ್ರಕ್ಕೆ

ಪ್ರತಿತಂತ್ರ ರೂಪಿಸುತ್ತೇವೆ. ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲವು

ಸಾಧಿಸಿರುವುದನ್ನು ಮರೆಯಬಾರದು ಎಂದರು.

ರೈತರ ಸಾಲ ಮನ್ನಾ ಆಗಿಲ್ಲ

ಸಾಲ ಮನ್ನಾ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೇ

ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿಲ್ಲ. ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ.

ಮೈತ್ರಿ ಸರ್ಕಾರದ ಸಚಿವರು ಭ್ರಷ್ಟರಾಗಿ ರೆಡ್ ಹ್ಯಾಂಡಾಗಿ ಸಿಕ್ಕಿದ್ದಾರೆ.ಆದರೂ

ಅವರು ಸಚಿವರಾಗಿ ಮುಂದುವರೆದಿದ್ದಾರೆ. ಇದು ನಮ್ಮ ರಾಜ್ಯದಲ್ಲಿ

ನಡೆಯುತ್ತಿರುವ ದುರಾಡಳಿತದ ಪರಿ ಎಂದು ಸಮ್ಮಿಶ್ರ ಸರ್ಕಾರದ ಮೇಲೆ

ಶ್ರೀರಾಮುಲು ಹರಿಹಾಯ್ದರು.

ನಾನು ಜಿಲ್ಲೆಯ ಮನೆ ಮಗ

ಜಿಲ್ಲೆಯ ಎಲ್ಲ ಜನರಿಗೆ ಹಾಗೂ ಬಿಜೆಪಿ ಪಕ್ಷದ ನಾಯಕರಿಗೆ ನಾನು ಕೃತಜ್ಞ

ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ

ಹೇಳಿದರು.

ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಇದ್ದ ಹಳೇ ಬಳ್ಳಾರಿ ಜಿಲ್ಲಾ ಪಂಚಾಯ್ತಿ

ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ನಾನು ಬಳ್ಳಾರಿ ಜಿಲ್ಲೆಯ ಮನೆ ಮಗ

ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷವನ್ನು ಚುನಾವಣೆ ಸಂದರ್ಭದಲ್ಲೇ ಬಿಡಲು ಕಾರಣವೇನು ಎಂಬ

ಪ್ರಶ್ನೆಗೆ ಉತ್ತರಿಸುತ್ತಾ, ‘ಮನಸಾರೆ ಗೊಬ್ಬರ ಹಾಕಿ, ಮನಸಾರೆ ಉಳುಮೆ

ಮಾಡಿದ್ದು ನಾನು. ಆದರೇ ಫಲ ಇನ್ನೊಬ್ಬರಿಗೆ ಕೊಟ್ಟರೆ ನನಗೆ ಹೇಗಾಗುತ್ತೆ?

ಕಾಂಗ್ರೆಸ್ ಪಕ್ಷ ಮಾಡಿದ್ದು ಹೀಗೆ’ ಎಂದು ಕಾಂಗ್ರೆಸ್ ಬಿಡಲು ಕಾರಣವನ್ನು

ಕೊಟ್ಟರು.

ಪತ್ನಿ ಕಾಂಗ್ರೆಸ್‍ನಲ್ಲಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಈಗ ನೀವು

ಬಿಜೆಪಿ ಸೇರಿರುವಿರಿ. ನಿಮ್ಮ ಪತ್ನಿಯ ಮುಂದಿನ ನಡೆ ಏನು ಎಂಬ ಸುದ್ಧಿಗಾರರ

ಪ್ರಶ್ನೆಗೆ ‘ನನ್ನ ಪತ್ನಿಗೆ ಯಾವ ಪಕ್ಷದಲ್ಲಿರಬೇಕು ಎಂದು ನಿರ್ಣಯಿಸುವ ಹಕ್ಕಿದೆ’

ಎಂದು ಅವರು ಉತ್ತರಿಸಿದರು. ನಮ್ಮ ಸಂಬಂಧಿಯಾದ ಬಾಲಚಂದ್ರ

ಜಾರಕಿಹೊಳಿಯವರೂ ಬಳ್ಳಾರಿಗೆ ಪ್ರಚಾರಕ್ಕೆ ಬರುತ್ತಾರೆ ಎಂದು ಈ

ಸಂದರ್ಭದಲ್ಲಿ ಅವರು ತಿಳಿಸಿದರು.

ಮೋದಿ ಮತ್ತೆ ಪ್ರಧಾನಿ

ಮೋದಿ ಅವರ ಸಮರ್ಥ ಆಡಳಿತದಿಂದಾಗಿ ಆರ್ಥಿಕತೆಯಲ್ಲಿ ನಮ್ಮ ದೇಶ 5ನೇ

ಸ್ಥಾನಕ್ಕೇರಿದೆ. ಈ ಬಾರಿ ಮೋದಿ ಮತ್ತೆ ಗೆಲ್ಲಲಿದ್ದು, ಮತ್ತೆ

ಪ್ರಧಾನಿಯಾಗಲಿದ್ದಾರೆ. ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ. ಅವರ ಶ್ರಮದಿಂದ

ಬಿಜೆಪಿ ಮತ್ತೆ ಅಧಿಕಾರ ಹಿಡಿದು ಭಾರತವನ್ನು ಮುನ್ನೆಡಸಲಿದೆ ಎಂದು

ಶ್ರೀರಾಮುಲು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ,

ಮುಖಂಡರಾದ ಎಸ್.ಪಕ್ಕೀರಪ್ಪ, ಮೃತ್ಯುಂಜಯ ಜಿನಗ, ಎಸ್. ಜೆ.ವಿ.

ಮಹಿಪಾಲ್ ಇದ್ದರು.

Leave a Reply

Your email address will not be published. Required fields are marked *