ಇಟಲಿಯಂತೆ ಭಾರತದಲ್ಲಿ ನಿರ್ಲಕ್ಷ್ಯ ಮಾಡಬೇಡಿ: ಇಟಲಿಯಿಂದ ಕನ್ನಡಿಗ ಹೇಮೆಗೌಡ ಎಚ್ಚರಿಕೆ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದ ಅತೀ ಹೆಚ್ಚು ಸಾವು – ನೋವಿಗೆ ಸಿಲುಕಿರುವ ಇಟಲಿಯಲ್ಲಿ ಅತೀವ ನಿರ್ಲಕ್ಷ್ಯ ವಹಿಸಲಾಗಿದ್ದು, ಇದರಿಂದ ಭಾರೀ ಬೆಲೆ ತೆರಬೇಕಾಯಿತು. ಇದಕ್ಕೆ ಭಾರತ ಜನ ಅವಕಾಶ ನೀಡಬಾರದು ಎಂದು ಇಟಲಿಯಲ್ಲಿ ವೈದ್ಯಕೀಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ ಹೇಮೆಗೌಡ ಎಚ್ಚರಿಕೆ ನೀಡಿದ್ದಾರೆ.
ಹೇಮೆಗೌಡ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ತುಮಕೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ 2007ರಲ್ಲಿ ಪದವಿ ಪೂರ್ಣಗೊಳಿಸಿದರು. ಕಳೆದ 10 ವರ್ಷಗಳಿಂದ ಇಟಲಿಯಲ್ಲಿ ನೆಲೆಸಿದ್ದಾರೆ. ಇಟಲಿ ಕನ್ನಡಿಗರ ಸಂಘದ ಅಧ್ಯಕ್ಷರಾಗಿರುವ ಇವರು ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದು ಕಳಕಳಿಯ ಮನವಿ ಮಾಡಿದ್ದಾರೆ.
ಇಟಲಿಯ ಟರಿಯನ್ ನಗರದಲ್ಲಿರುವ ರಿವೊಲಿ ಪಬ್ಲಿಕ್ ಆಸ್ಪತ್ರೆಯಲ್ಲಿ ಹೇಮೇಗೌಡ ಕೆಲಸ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹುಟ್ಟಿದ ಮನೆಯಿಂದ 1 ಕಿ.ಮೀ ಸಮೀಪದಲ್ಲಿ ಈ ಆಸ್ಪತ್ರೆ ಇದೆ.
ಈ ಕುರಿತು ವಿವಿಧ ಸುದ್ದಿವಾಹಿನಿಗಳ ಜತೆ ಮಾತನಾಡಿದ ಅವರು, ಇಟಲಿ ದೇಶದ ಒಟ್ಟು ಜನಸಂಖ್ಯೆ 7 ರಿಂದ 8 ಕೋಟಿ ಇದ್ದು, ಸೋಂಕಿನ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಲಾಗಿತ್ತು. ಮಾರ್ಚ್ ಮೊದಲ ವಾರದಲ್ಲಿ ಮಾತ್ರ ಲಾಕ್ ಡೌನ್ ಘೋಷಿಸಲಾಯಿತು. ಅಲ್ಲಿಯ ತನಕ ಸಮಸ್ಯೆಯ ತೀವ್ರತೆ ಅರಿವಿಗೆ ಬಂದಿರಲಿಲ್ಲ. ಈ ವೇಳೆಗಾಗಲೇ ತೀವ್ರ ಅನಾಹುತ ಸಂಭಿವಿಸಿತ್ತು ಎಂದಿದ್ದಾರೆ.

ಚೈನಾ ನಂತರ ಕೊರೊನಾ ಅತೀ ಹೆಚ್ಚು ದಾಳಿ ಮಾಡಿರುವುದು ಇಟಲಿಯಲ್ಲಿ. ಆಲಕ್ಷ್ಯದಿಂದಾಗಿ ಇವತ್ತಿಗೂ ಕೊರೊನಾ ನಮ್ಮ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿಯೊಂದು ಆಸ್ಪತ್ರೆಗಳಲ್ಲಿ 30 ಬೆಡ್ ಗಳಿಗೆ ಒಂದೊಂದು ವಾರ್ಡ್ ಗಳನ್ನು ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿ ನಾನು ಒಂದು ವಾರ್ಡ್ ನ ಮೇಲ್ವಿಚಾರಕನಾಗಿದ್ದು, ಪ್ರತಿನಿತ್ಯ ನನ್ನ ಕಣ್ಣ ಮುಂದೆ ಕೆಲವೇ ಗಂಟೆಗಳಲ್ಲಿ ಸಾವುಗಳಾಗುತ್ತಿವೆ ಎಂದಿದ್ದಾರೆ.
ಕೊರೊನಾದಿಂದ ಮೃತಪಟ್ಟವರನ್ನು ಅವರ ಮನೆಯವರಿಗೆ ಹಸ್ತಾಂತರ ಮಾಡುತ್ತಿಲ್ಲ. ಸರ್ಕಾರವೇ ಅವರ ಅಂತಿಮ ವಿಧಿವಿಧಾನ ನೆರವೇರಿಷಸುತ್ತಿದೆ. ಮೃತಪಟ್ಟರನ್ನು ನೋಡಲು ಅವರ ರಕ್ತ ಸಂಬಂಧಿಗಳನ್ನ ಬಿಟ್ಟು ಬೇರೆ ಯಾರಿಗೂ ಅವಕಾಶವಿಲ್ಲ. ದೂರದಿಂದ ನಿಂತು ಅವರ ಮುಖ ನೋಡಬಹುದು. ಇನ್ನು ಕೆಲ ಪ್ರಕರಣಗಳಲ್ಲಿ ಮೃತಪಟ್ಟವರ ಮುಖ ಕೂಡ ನೋಡಲು ಸಂಬಂಧಿಕರಿಗೆ ಸಾಧ್ಯವಾಗಿಲ್ಲ. ಕೆಲವರ ಸಂಬಂಧಿಕರು ಬೇರೆ ದೇಶದಲ್ಲಿದ್ದು ಇಟಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಸದ್ಯ ಇಟಲಿಯ ಪ್ರತಿಯೊಂದು ನಗರಗಳು ಲಾಕ್ ಡೌನ್ ಆಗಿವೆ. ಹೊರಗಡೆ ಯಾರೊಬ್ಬರೂ ಓಡಾಡುವಂತಿಲ್ಲ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಇಟಲಿಯಲ್ಲಿ ಹೆಚ್ಚು ಮಂದಿ ಹಿರಿಯ ನಾಗರಿಕರಿದ್ದು, ಇಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಇಟಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂಬುದು ಸುಳ್ಳು. ಎಲ್ಲಾ ವಯೋಮಾನದವರಿಗೂ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಕಡಿಮೆವಯಸ್ಸಿನವರು ಸೋಂಕಿತರಾಗಿ ವೆಂಟಿಲೇಟರ್ ಸಮಸ್ಯೆಯಾದರೆ ಆಗ 80 ವರ್ಷ ಮೇಲ್ಪಟ್ಟವರಲ್ಲಿ ಯಾರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೋ ಅಂತಹವರಿಂದ ವೆಂಟಿಲೇಟರ್ ತೆಗೆದು ಚೇತರಿಸಿಕೊಳ್ಳುವವರಿಗೆ ಅಳವಡಿಸಿ ಚಿಕಿತ್ಸೆ ಮುಂದುವರೆಸುತ್ತಿದ್ದೇವೆ. ಹೇಗೂ ಅವರು ಬದುಕುಳಿಯುವುದಿಲ್ಲ ಎಂಬುದು ಖಚಿತವಾದಾಗ ಮಾತ್ರ ಅಂತಹವರ ವೆಂಟಿಲೇಟರ್ ಬೇರೊಬ್ಬರಿಗೆ ಅಳವಡಿಸಲಾಗುತ್ತಿದೆ. ಚೇತರಿಕೊಳ್ಳುತ್ತಿರುವ ವೃದ್ಧರಿಗೆ ವೆಂಟಿಲೇಟರ್ ನಲ್ಲೇ ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾಗೆ ಹೆದರಿ ಆಸ್ಪತ್ರೆ ಸಿಬ್ಬಂದಿ ಸಹ ದೀರ್ಘ ಕಾಲದ ರಜೆ ಪಡೆದಿದ್ದಾರೆ. ಇಟಲಿಯಲ್ಲಿ ಕೊರೊನಾಗೆ ಹೆದರಿ ಹಿರಿಯ ನರ್ಸ್ ಗಳು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಅನಾರೋಗ್ಯದ ನೆಪವೊಡ್ಡಿ ದೀರ್ಘಕಾಲದ ರಜೆ ಮೇಲೆ ತೆರಳಿದ್ದಾರೆ. ಸದ್ಯ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹೊರದೇಶದಿಂದ ಬಂದಿರುವವರು. ಹೀಗಾಗಿ ನಮಗೂ ಆತಂಕ ಇದೆ. ಆದರೂ ನಮ್ಮ ಕೆಲಸಕ್ಕೆ ನಾವು ನ್ಯಾಯ ಒದಗಿಸಬೇಕಾಗಿದೆ. ಇಟಲಿ ಮಾಡಿದ ತಪ್ಪನ್ನು ಭಾರತ ಮಾಡಬಾರದು. ನಾನು ಒಬ್ಬ ಭಾರತೀಯನಾಗಿ ಕನ್ನಡಿಗನಾಗಿ ಹೇಳುತ್ತಿದ್ದೇನೆ. ಕೊರೊನಾ ವೈರಸ್ ವಿಷಯದಲ್ಲಿ ಯಾರಿಗೂ ನಿರ್ಲಕ್ಷ್ಯ ಬೇಡ. ಎಲ್ಲರೂ ಮನೆಯಲ್ಲಿದ್ದು, ರೋಗ ಹರಡಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter