ಕೊರೋನಾ ಮುನ್ನೆಚ್ಚರಿಕೆಗಾಗಿ ರಾಜ್ಯ ಸ್ತಬ್ಧ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್ ಗಳು, ಚಿತ್ರಮಂದಿರ, ಪಬ್ಸ್, ನೈಟ್ ಕ್ಲಬ್, ಎಗ್ಸಿಬಿಷನ್, ಸಮ್ಮರ್ ಕ್ಯಾಂಪ್, ಮದುವೆ, ಸಮ್ಮೇಳನ, ಪಾರ್ಟಿ, ಹುಟ್ಟುಹಬ್ಬ, ಎಂಗೇಜ್ಮೆಂಟ್, ಮದುವೆ, ಕ್ರೀಡಾ ಚಟುವಟಿಕೆಗಳು ಇತ್ಯಾದಿ ಕಾರ್ಯಕ್ರಮ ನಿಲ್ಲಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾಳೆಯಿಂದ ಒಂದು ವಾರದ ಅವಧಿಗೆ ರಾಜ್ಯಾದ್ಯಂತ ಮಾಲ್‍ಗಳು, ಚಿತ್ರಮಂದಿರಗಳು, ನೈಟ್ ಕ್ಲಬ್ ಮುಚ್ಚುವಂತೆ ಸೂಚಿಸಲಾಗಿದೆ. ಬೇಸಿಗೆ ಶಿಬಿರಗಳು, ಸಭೆ ಸಮಾರಂಭಗಳು, ಕ್ರೀಡಾಕೂಟ, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸದಿರುವಂತೆ ಸೂಚನೆ ನೀಡಲಾಗಿದೆ ಎಂದರು.

ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಪರೀಕ್ಷೆಗಳು, ಸರ್ಕಾರಿ ಕಚೇರಿಗಳು, ಅಧಿವೇಶನ ಅಬಾಧಿತವಾಗಿ ನಡೆಯಲಿವೆ. ವಿಶ್ವವಿದ್ಯಾಲಯ, ಕಾಲೇಜುಗಳಿಗೂ ಒಂದು ವಾರ ರಜೆ ಘೋಷಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಕರೊನಾ ವೈರಸ್ ಸೋಂಕಿನಿಂದ ಕಲಬುರಗಿಯ ವ್ಯಕ್ತಿಯೊಬ್ಬರು ದುರದೃಷ್ಟವಶಾತ್ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಡಾ. ದೇವಿ ಶೆಟ್ಟಿ ಹಾಗೂ ವಿವಿಧ ವೈದ್ಯಕೀಯ ಸಂಘಟನೆಗಳೊಂದಿಗೆ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಈ ನಿರ್ಧಾರವನ್ನು ಪ್ರಕಟಿಸಿದರು.

ಈ ಸೋಂಕು ತಗುಲದೆ ಇರುವಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಎಲ್ಲ ಖಾಸಗಿ ಆಸ್ಪತ್ರೆಯವರು ಈ ಸೋಂಕಿನ ಲಕ್ಷಣ ಇರುವ ರೋಗಿಗಳು ಬಂದಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಸಂಘಟನೆಯವರಿಗೂ ಸೂಚನೆ ನೀಡಲಾಗಿದೆ.

ವಿದೇಶ ಪ್ರಯಾಣದಿಂದ ಬಂದ ಪ್ರಯಾಣಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಅವರ ಕುಟುಂಬದವರು ಅವರು ಯಾವುದೇ ದೇಶದಿಂದ ಹಿಂದಿರುಗಿದರೂ, ಕಡ್ಡಾಯವಾಗಿ 14 ದಿನಗಳ ಕಾಲ ಅವರ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು (ಐಸೋಲೇಷನ್). ಎಲ್ಲ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಖಾಸಗಿ ಕ್ಲಿನಿಕ್‍ನವರು ಕಳೆದ 14 ದಿನಗಳಿಂದ ವಿದೇಶದಿಂದ ಹಿಂದಿರುಗಿ ಚಿಕಿತ್ಸೆ ಪಡೆದವರು ಇದ್ದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಖಾಸಗಿ ಆಸ್ಪತ್ರೆಗಳು ಎಲ್ಲ ರೀತಿಯಲ್ಲೂ ಸಹಕರಿಸಬೇಕು.

ಐಎಂಎ, ಡಾ. ದೇವಿ ಶೆಟ್ಟಿ, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ. ರವೀಂದ್ರ ಅವರು ಸೇರಿದಂತೆ ಖಾಸಗಿ ಆಸ್ಪತ್ರೆಯವರು, ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದರು. ಕೋವಿಡ್ 19 ಸೋಂಕು ಹರಡದಂತೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಅವರ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ. ಸುಧಾ ಮೂರ್ತಿಯವರು ಇನ್‍ಫೋಸಿಸ್ ಫೌಂಡೇಷನ್ ವತಿಯಿಂದ ಈ ಸೋಂಕು ತಡೆಗಟ್ಟುವಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ. ಯಾರನ್ನೂ ಮುಟ್ಟಬೇಡಿ. (ಸೋಷಿಯಲ್ ಡಿಸ್ಟೆನ್ಸಿಂಗ್) ಸೋಂಕು ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ವಹಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

Share on facebook
Share on twitter
Share on linkedin
Share on whatsapp
Share on email

1 Comment

  • admin , 14th March 2020 @ 9:40 am

    #CoronaVirus

Leave a Reply

Your email address will not be published. Required fields are marked *

Stay Connected

Newsletter