೩೭೦ನೇ ವಿಧಿ ಭಯೋತ್ಪಾದನೆಯ ಹೆಬ್ಬಾಗಿಲು

೩೭೦ನೇ ವಿಧಿ ಭಯೋತ್ಪಾದನೆಯ ಹೆಬ್ಬಾಗಿಲು


ನವದೆಹಲಿ, : ಜಮ್ಮು ಕಾಶ್ಮೀರದ ೩೭೦ನೇ ವಿಧಿ ಮತ್ತು ಪರಿಚ್ಛೇದ ೩೫ ಎ ಉಗ್ರಗಾಮಿತ್ವಕ್ಕೆ ಹೆಬ್ಬಾಗಿಲಾಗಿದ್ದು, ಇವುಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಕಾರ್ಯವು ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಕತಾ ಓಟಕ್ಕೆ ಚಾಲನೆ ನೀಡಿದ ಬಳಿ ಮಾತನಾಡಿ, ೩೭೦ ಮತ್ತು ೩೫ ಎ ರದ್ದುಗೊಳಿಸುವಿಕೆಯಿಂದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಕನಸು ನನಸಾಗಿದೆ ಎಂದು ಹೇಳಿದರು.
ಸರ್ದಾರ್ ಪಟೇಲ್ ಅವರ ದಣಿವರಿಯದ ಪರಿಶ್ರಮವೇ ಸವಾಲುಗಳ ನಡುವೆಯೂ ಭಾರತದ ಏಕೀಕರಣಕ್ಕೆ ಕಾರಣವಾಯಿತು ಎಂದರು.

ಜಮ್ಮು ಕಾಶ್ಮೀರದ ವಿಶೇಷಾಧಿಕಾರ ಎನಿಸಿದ್ದ ೩೭೦ನೇ ವಿಧಿ ಭಾರತದಲ್ಲಿ ಭಯೋತ್ಪಾದನೆಯ ಹೆಬ್ಬಾಗಿಲು. ಎಪ್ಪತ್ತು ವರ್ಷಗಳಿಂದ ಯಾರೂ ಅದನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಕಾರ್ಯವು ೩೭೦ ಮತ್ತು ೩೫ ಎ ವಿಧಿಗಳನ್ನು ರದ್ದುಪಡಿಸುವ ಮೂಲಕ ಪೂರ್ಣಗೊಂಡಿದೆ ಎಂದು ಹೇಳಿದರು.

ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಅವರ ೧೪೪ ನೇ ಜನ್ಮ ದಿನಾಚರಣೆಯಂದು ಗೃಹ ಸಚಿವರು ಜನರಿಗೆ ಐಕ್ಯತೆಯ ಪ್ರತಿಜ್ಞೆಯನ್ನು ನೀಡಿದರು.
ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ೩೫ನೇ ಪುಣ್ಯತಿಥಿಯೂ ಆಗಿದ್ದು, ಅಮಿತ್ ಶಾ ತಮ್ಮ ಭಾಷಣದ ವೇಳೆ ದೇಶದ ಮೊದಲ ಮಹಿಳಾ ಪ್ರಧಾನಿಯನ್ನು ಸ್ಮರಿಸಿದರು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಗೃಹ ಸಚಿವ ಕಿಶನ್ ರೆಡ್ಡಿ, ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆಟ್ಟ ಗುಣಮಟ್ಟದ ಗಾಳಿಯನ್ನು ಲೆಕ್ಕಿಸದ ಜನರು ಏಕತೆಯ ಓಟಕ್ಕಾಗಿ ಸೇರಿದ್ದರು. ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಿಂದ ಪ್ರಾರಂಭವಾದ ಓಟವು ಅಮರ್ ಜವಾನ್ ಜ್ಯೋತಿ ವರೆಗೆ ನಡೆಯಿತು.
ಗೃಹ ಸಚಿವರು ಧ್ವಜವನ್ನು ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್ ಹಸ್ತಾಂತರಿಸಿದ ನಂತರ ಓಟಕ್ಕೆ ಚಾಲನೆ ನೀಡಲಾಯಿತು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.