ಬೆಂಗಳೂರು: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ , ನಿವಾರ್ ಚಂಡ ಮಾರುತದ ಅಡ್ಡ ಪರಿಣಾಮ ಬರುವ ಡಿಸೆಂಬರ್ 4ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮುಂದಿನ 36 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.
ಅರಬ್ಬಿ ಸಮುದ್ರದಲ್ಲಿಯೂ ವಾಯುಭಾರ ಕುಸಿತ ಉಂಟಾಗಿದ್ದು, ಅದು ಸಹ ಚಂಡಮಾರುತವಾಗಿ ಪರಿವರ್ತನೆಗೊಂಡರೆ ರಾಜ್ಯದ ಹೆಚ್ಚಿನ ಪ್ರದೇಶದಲ್ಲಿ ಮಳೆಯಾಗಲಿದ್ದು, ಡಿಸೆಂಬರ್ 4ರ ತನಕ ಇದು ಮುಂದುವರೆಯಲಿದೆ.
ಡಿಸೆಂಬರ್ 1ರಿಂದ 4ರ ತನಕ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿಯೂ ಮಳೆಯಾಗುವ ನಿರೀಕ್ಷೆ ಇದೆ.
ತಮಿಳುನಾಡು ಕರಾವಳಿ ಭಾಗದಲ್ಲಿ ಮಳೆಯಾಗಲಿದೆ. ಪುದುಚೇರಿ, ಕಾರೈಕಲ್, ಲಕ್ಷದ್ವೀಪ, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿಯೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.