ಉಪ ಚುನಾವಣೆಗೆ ಸುಪ್ರೀಂ ತಡೆ

ಉಪ ಚುನಾವಣೆಗೆ ಸುಪ್ರೀಂ ತಡೆ

ನವದೆಹಲಿ: ರಾಜ್ಯ ವಿಧಾನಸಭೆ ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದ್ದು, 15 ಅನರ್ಹ ಶಾಸಕರು ನಿರಾಳರಾಗಿದ್ದಾರೆ.

ಸತತ ಎರಡನೇ ದಿನವೂ ಅನರ್ಹ ಶಾಸಕರ ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ ಉಪ ಚುನಾವಣೆಗೆ ತಾತ್ಕಾಲಿಕ ತಡೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ.
ಅನರ್ಹ ಶಾಸಕರ ಮೇಲ್ಮನವಿ ಅರ್ಜಿ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್‍ನಲ್ಲಿ ಗುರುವಾರ ಬೆಳಗ್ಗೆ 11 ಗಂಟೆಯಿಂದಲೇ ಆರಂಭವಾಗಿತ್ತು. ಬುಧವಾರ ಅನರ್ಹ ಶಾಸಕರ ಪರ ವಕೀಲರು ವಾದ ಮಂಡಿಸಿದ್ದರು. ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಗುರುವಾರ ಕಾಂಗ್ರಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.

ಸ್ಪೀಕರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಚುನಾವಣಾ ಪ್ರಕ್ರಿಯೆಗೆ ತಡೆ ನೀಡುವುದು ಬೇಡ. ಶಾಸಕರ ರಾಜೀನಾಮೆಯನ್ನು ಸ್ವೀಕರಿಸುವ ಅಗತ್ಯವಿದೆ. ತೆರವಾಗಿರುವ ಕ್ಷೇತ್ರಗಳಿಗೆ ಚುನಾವಣೆ ನಡೆಯಲೇಬೇಕು ಎಂದು ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ವಾದಿಸಿದ್ದರು.

ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ಆದೇಶಕ್ಕೆ ತಡೆ ನೀಡಿ, ಇಲ್ಲವೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಅಥವಾ ಉಪ ಚುನಾವಣೆಗೆ ತಡೆ ನೀಡುವಂತೆ ಕೋರಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಮಧ್ಯಂತರ ಪರಿಹಾರ ಲಭಿಸಿದ್ದರೂ ಕೂಡ, ರಾಜ್ಯದ 17 ಶಾಸಕರ ಅನರ್ಹತೆ ಮುಂದಿವರಿದಿದೆ. ತೆರವಾದ ಕ್ಷೇತ್ರಗಳನ್ನು 6 ತಿಂಗಳಿಗಿಂತ ಹೆಚ್ಚು ಕಾಲ ಖಾಲಿ ಬಿಡುವಂತಿಲ್ಲ. ಹೀಗಾಗಿ 6 ತಿಂಗಳೊಳಗೆ ಸುಪ್ರೀಂ ಕೋರ್ಟ್ ಆದೇಶ ಹೊರಬೀಳಲಿದೆ.

ಸುಪ್ರೀಂ ತೀರ್ಪಿಗೆ ಸಂತಸ

ಸುಪ್ರಿಂಕೋರ್ಟ್ ತೀರ್ಪಿಗೆ ಅನರ್ಹ ಶಾಸಕರು ಸಂತಸ ವ್ಯಕ್ತಪಡಿಸಿದ್ದು, ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ ಎಂದು ರಾಜರಾಜೇಶ್ವರಿನಗರ ಅನರ್ಹ ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ.
ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ, ಪ್ರಕರಣದ ಬಗ್ಗೆ ವ್ಯಾಪಕ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ಪೀಕರ್ ಉದ್ದೇಶಪೂರ್ವಕವಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗಲಿದೆ. ಸ್ಪೀಕರ್ ಕಾಂಗ್ರೆಸ್ ಪಕ್ಷದ ಪರವಾಗಿ ತೀರ್ಪು ಕೊಟ್ಟಿದ್ದಾರೆ ಹೊರತು ನ್ಯಾಯಯುತ ತೀರ್ಪು ನೀಡಿಲ್ಲ ಎಂದರು.
ಆರ್.ಶಂಕರ್ ಮಾತನಾಡಿ, ನ್ಯಾಯಾಲಯ ಉಪಚುನಾವಣೆಗೆ ತಡೆ ನೀಡಿದೆ. ನನ್ನ ಕ್ಷೇತ್ರಕ್ಕೆ ಚುನಾವಣೆಯೇ ನಡೆಯಬೇಕಿರಲಿಲ್ಲ. ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನ ಮಾಡಿರಲಿಲ್ಲ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.