ಗಣಿನಾಡಿನಲ್ಲಿ ಮುಂದುವರಿದ ಮಳೆರಾಯನ ಆರ್ಭಟ

ಗಣಿನಾಡಿನಲ್ಲಿ ಮುಂದುವರಿದ ಮಳೆರಾಯನ ಆರ್ಭಟ

3ಸಾವಿರ ಹೆಕ್ಟೇರ್ ಬೆಳೆ ನಾಶ, 4.3 ಕೋಟಿ ರೂ. ಹಾನಿ ಅಂದಾಜು

• ಬಳ್ಳಾರಿ ಮತ್ತು ಸಿರುಗುಪ್ಪ ಭಾಗದ ಅಂದಾಜು 550 ಹೆಕ್ಟೇರ್ ಪ್ರದೇಶ ಜಲಾವೃತ!

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ವರುಣನ ಅರ್ಭಟ ಜೋರಾಗಿದೆ. ವಿಪರೀತವಾಗಿ ಸುರಿದ ಈ ಮಹಾಮಳೆಗೆ ಒಂದೆಡೆ ವಾತಾವರಣದಲ್ಲಿ ತಂಪು ಆವರಿಸಿ, ಸಾರ್ವಜನಿಕರ ಮನೋಲ್ಲಾಸಕ್ಕೆ ಕಾರಣವಾದ್ರೆ, ಮತ್ತೊಂದೆಡೆ ರೈತಾಪಿ ವರ್ಗವನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

ಕಳೆದ ನಾಲ್ಕೈದು ದಿನಗಳಿಂದ ಬಳ್ಳಾರಿ ಜಿಲ್ಲೆಯದಾದ್ಯಂತ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಜಿಲ್ಲೆಯಲ್ಲಿ 3 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. 277 ಮನೆಗಳು ಹಾನಿಯಾಗಿದ್ದು,ಇದರ ಜತೆಗೆ 11 ಪ್ರಾಣಿಗಳು ಜೀವ ಕಳೆದುಕೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. 4.30 ಕೋಟಿ ರೂ.ಗಳ ನಷ್ಟ ಇದುವರೆಗೆ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಬಳ್ಳಾರಿ ತಾಲೂಕಿನಲ್ಲಿ 39 ಮನೆಗಳಿಗೆ ಹಾನಿಯಾಗಿದ್ದು 3.9ಲಕ್ಷ ರೂ.ನಷ್ಟ ಉಂಟಾಗಿದೆ. 826.31 ಹೆಕ್ಟೇರ್ ಬೆಳೆ ಹಾನಿಯಾಗಿದೆ ಮತ್ತು 111.50ಲಕ್ಷ ರೂ.ಗಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಭತ್ತ, ಹತ್ತಿ ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಮಾಡುವುದು ಬಾಕಿ ಇದೆ.

ಸಂಪರ್ಕ ಕಡಿತ
ಅಲ್ಲದೇ, ಜಿಲ್ಲೆಯ ನಾನಾ ಗ್ರಾಮಗಳಿಗೆ ಸಂಪರ್ಕದ ಕೊಂಡಿಯಂತಾದ ಸೇತುವೆಗಳೇ ಜಲಾವೃತಗೊಂಡು ಸಾರ್ವಜನಿಕ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟು ಮಾಡಿದೆ. ಸಾರ್ವಜನಿಕ ಸಂಪರ್ಕ ಸೇತುವೆ ಮೇಲೆಲ್ಲಾ ಮಳೆಯ ನೀರಿನ ಕೋಡಿಯೇ ಹರಿಯುತ್ತಿದೆ. ಅದರಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಬೈಕ್ ಸವಾರರು ಹಾಗೂ ಪ್ರಯಾಣಿಕರನ್ನು ಸಾಗಿಸುವ ವಾಹನಗಳು ಆ ಸೇತುವೆ ಮೇಲೆಲ್ಲಾ ಭಯದಿಂದ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.ಜಿಲ್ಲೆಯ ಬಹುತೇಕ ಹೊಲ, ಗದ್ದೆಗಳಿಗೆ ಈ ಮಹಾ ಮಳೆಯ ನೀರು ನುಗ್ಗಿವೆ. ಅದರಿಂದ ಅಪಾರ ಪ್ರಮಾಣದ ಹತ್ತಿ, ಮೆಣಸಿನಕಾಯಿ ಸೇರಿದಂತೆ ಇನ್ನಿತರೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ.

ಸಿರಗುಪ್ಪದಲ್ಲಿ ಅತಿಹೆಚ್ಚು ಹಾನಿ
ಇಡೀ ಜಿಲ್ಲೆಯಲ್ಲಿ ಸಿರಗುಪ್ಪದಲ್ಲಿ ಅತಿಹೆಚ್ಚು ಹಾನಿ ಸಂಭವಿಸಿದೆ. ಸಿರಗುಪ್ಪ ತಾಲೂಕಿನಲ್ಲಿ 92 ಮನೆಗಳಿಗೆ ಹಾನಿಯಾಗಿದ್ದು 9.2 ಲಕ್ಷ ರೂ. ನಷ್ಟವಾಗಿದೆ. 1640 ಹೆಕ್ಟೇರ್ ಬೆಳೆಹಾನಿಯಾಗಿದ್ದು 221.40ಲಕ್ಷ ರೂ.ಹಾನಿಯಾಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಬಾಕಿ ಇದೆ.
ಕುರುಗೋಡು ತಾಲೂಕಿನಲ್ಲಿ 63 ಮನೆಗಳು ಹಾನಿಯಾಗಿದ್ದು 10.90 ಲಕ್ಷ ರೂ. ಅಂದಾಜು ಹಾನಿಯಾಗಿದೆ.503.64 ಹೆಕ್ಟೇರ್ ಬೆಳೆಹಾನಿ ಯಾಗಿದ್ದು 68ಲಕ್ಷ ರೂ.ನಷ್ಟು ನಷ್ಟವುಂಟಾಗಿದೆ. ಮೆಣಸಿನಕಾಯಿ, ಭತ್ತ,ಹತ್ತಿ ನೀರಿನಲ್ಲಿ ಮುಳುಗಡೆಯಾಗಿದ್ದು, ನೀರು ನಿಂತಿರುವ ಹಿನ್ನೆಲೆ ಜಂಟಿ ಸಮೀಕ್ಷೆ ಬಾಕಿ ಇದೆ.

ಇತರ ತಾಲೂಕಿನಲ್ಲಿ ಉಂಟಾಗಿರುವ ನಷ್ಟದ ವಿವಿರ
ಸಂಡೂರು ತಾಲೂಕಿನಲ್ಲಿ 10 ಕುರಿಗಳು ಸಿಡಿಲಿಗೆ ಮೃತಪಟ್ಟಿವೆ. 14 ಮನೆಗಳು ಹಾನಿಯಾಗಿದ್ದು, 1.4ಲಕ್ಷ ರೂ. ನಷ್ಟವಾಗಿದೆ. ಹೊಸಪೇಟೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. 2 ಮನೆಗಳಿಗೆ ಹಾನಿಯಾಗಿದ್ದು 20 ಸಾವಿರ ರೂ.ನಷ್ಟವುಂಟಾಗಿದೆ. ಕಂಪ್ಲಿ ತಾಲೂಕಿನಲ್ಲಿ 16 ಮನೆಗಳಿಗೆ ಹಾನಿಯಾಗಿದ್ದು 1.6ಲಕ್ಷ ರೂ.ನಷ್ಟ. ಹಗರಿಬೊಮ್ಮನಹಳ್ಳಿಯಲ್ಲಿ 12 ಮನೆಗಳಿಗೆ ಹಾನಿಯಾಗಿದ್ದು 1.2ಲಕ್ಷ ರೂ.ನಷ್ಟವುಂಟಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಧಾರಾಕರ ಮಳೆ ಸುರಿದಿದ್ದರಿಂದ ಗೊಡೆ ಕುಸಿದಿದ್ದು, ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಎಮ್ಮೆ ಸಾವನ್ನಪ್ಪಿದೆ. 18 ಮನೆಗಳಿಗೆ ಹಾನಿಯಾಗಿದ್ದು, 1.8ಲಕ್ಷ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ 12 ಮತ್ತು 9 ಮನೆಗಳು ಸೇರಿದಂತೆ ಒಟ್ಟು 21 ಮನೆಗಳಿಗೆ ಹಾನಿಯಾಗಿದ್ದು 2.10 ಲಕ್ಷ ರೂ.ನಷ್ಟವುಂಟಾಗಿದೆ.
ಕುರುಗೋಡು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮಾರುತಿ ಕ್ಯಾಂಪ್-ಸಿದ್ದಮ್ಮನಹಳ್ಳಿ ಸೇತುವೆ, ಬಾದನಹಟ್ಟಿ ಯಿಂದ ಸಿದ್ದಮ್ಮನಹಳ್ಳಿ ಸೇತುವೆ, ದಮ್ಮೂರು-ಕೊರ್ಲಗುಂದಿ ಸೇತುವೆ, ದಮ್ಮೂರು-ಹಂದಿಹಾಳ್ ಸೇತುವೆ, ಕ್ಯಾದಿಗಿಹಾಳ್ ಸೇತುವೆಗಳು ಮಳೆಯಿಂದ ಹಾನಿಗೊಂಡಿರುತ್ತವೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಇನ್ನೂ ಮಳೆಯೂ ಕೂಡ ನಿಂತಿಲ್ಲ. ಹೀಗಾಗಿ, ಬೆಳೆನಷ್ಟ ಎಷ್ಟಾಗಿದೆ ಎಂಬುದನ್ನು ಅಂದಾಜಿಸಲು ಆಸಾಧ್ಯ. ಮಳೆ ನಿಂತುಕೊಂಡು, ನೀರೆಲ್ಲ ಬೇರೆಡೆಗೆ ಸ್ಥಳಾಂತರವಾದ ಮೇಲೆ ಈ ಬೆಳೆನಷ್ಟದ ಸಮೀಕ್ಷೆಯನ್ನು ಮಾಡಲಾಗುವುದು. ಬಳ್ಳಾರಿ ಹಾಗೂ ಸಿರುಗುಪ್ಪ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳೊಂದಿಗೆ ನಾನೂ ಕೂಡ ಕಳೆದ ಮುರ್ನಾಲ್ಕು ದಿನಗಳಿಂದ ಬೆಂಬಿಡದೇ ತಿರುಗಾಟ ನಡೆಸಿದ್ದೇವೆ. ಈಗಲೂ ಮಳೆ ಮುಂದುವರಿದಿದ್ದರಿಂದ ಬೆಳೆನಷ್ಟದ ಅಂದಾಜು ಸಿಗುತ್ತಿಲ್ಲ. ಆದಷ್ಟು ಬೇಗನೆ ಈ ಬೆಳೆನಷ್ಟದ ಸಮೀಕ್ಷೆಯನ್ನು ಮಾಡಲಾಗುವುದು. – ಡಾ.ಮಲ್ಲಿಕಾರ್ಜುನ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಜಿಲ್ಲಾದ್ಯಂತ ಸುರಿದ ಮಳೆಯ ಪ್ರಮಾಣವೆಷ್ಟು?:
ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಸಂಡೂರು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಅತೀ ಹೆಚ್ಚಿನ ಮಿಲಿಮೀಟರ್ ನಷ್ಟು ಮಳೆ ಸುರಿ ದಿದೆ.
ಬಳ್ಳಾರಿ – 264.4, ಹಡಗಲಿ – 56, ಹಗರಿಬೊಮ್ಮನಹಳ್ಳಿ – 174.2, ಹೊಸಪೇಟೆ – 102.6, ಕೂಡ್ಲಿಗಿ – 97.9, ಸಂಡೂರು- 190.2, ಸಿರುಗುಪ್ಪ – 209.6, ಹರಪನಹಳ್ಳಿ – 74.6 ಮಿಲಿಮೀಟರ್ ಸೇರಿದಂತೆ ಈ ದಿನದವರೆಗೂ ಕೂಡ ಒಟ್ಟಾರೆಯಾಗಿ 1168.9 ಮಿಲಿಮೀಟರ್ ನಷ್ಡು ಮಳೆಯು ಸುರಿದಿದೆ.

ಕಳೆದ ಮೂರ್ನಾಲ್ಕು ದಿನಗಳಿಂದಲೂ ಕಣ್ಣಿಗೆ ನಿದ್ರೆಯೂ ಇಲ್ಲ. ಕೈಗೆ ಬಂದ ಬೆಳೆ ನಷ್ಟ ಉಂಟಾಗುತ್ತೆ ಎಂಬ ಸಂಕಷ್ಟದಲ್ಲಿ ನಾವಿದ್ದರೆ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಕನಿಷ್ಠ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ಅಧಿಕಾರಿವರ್ಗ ಬಂದು ಸಮೀಕ್ಷೆಕಾರ್ಯ ನಡೆಸಿದೆಯಾದ್ರೂ ಪರಿಹಾರ ಯಾವಾಗ ಕೊಡ್ತಾರೋ, ಎಷ್ಟು ಕೊಡ್ತಾರೋ ಎಂಬುದೇ ತಿಳಿಯುತ್ತಿಲ್ಲ. – ಗೋವಿಂದರೆಡ್ಡಿ, ರೈತ, ಅಸುಂಡಿ ಗ್ರಾಮ

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.