ಬಳ್ಳಾರಿ: ಇಂದು ಬಳ್ಳಾರಿಯಲ್ಲಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ ಸೂಚಿಸಿ ವಿದ್ಯಾರ್ಥಿ ಸಂಘಟನೆ ಎಐಡಿಎಸ್ಓ, ಮಹಿಳಾ ಸಂಘಟನೆ ಎಐಎಮ್ಎಸ್ಎಸ್, ಯುವಜನ ಸಂಘಟನೆ ಎಐಡಿವೈಓ ಬಳ್ಳಾರಿ ಜಿಲ್ಲಾ ಸಮಿತಿಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿಗಳಾದ ರವಿಕಿರಣ್.ಜೆ.ಪಿ. ಮಾತನಾಡಿ,ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ವಿರೋಧದ ನಡುವೆಯೇ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಅತ್ಯಂತ ಅಪ್ರಜತಾಂತ್ರಿಕವಾಗಿ ಹೊಸ ಶಿಕ್ಷಣ ನೀತಿಯನ್ನು ಇಡೀ ದೇಶದ ಜನತೆಯ ಮೇಲೆ ಹೇರಲಾಗಿದೆ. ಶಿಕ್ಷಣದಿಂದ ಇಗಾಗಲೇ ವಂಚಿತರಾಗಿರುವ ದೇಶದ ಅಸಂಖ್ಯಾತ ಬಡ ಮಕ್ಕಳು ಈ ನೀತಿಯಿಂದಾಗಿ ಶಿಕ್ಷಣದಿಂದ ಮತ್ತಷ್ಟು ದೂರ ತಳ್ಳಲ್ಪಡುತ್ತಾರೆ. ಇನ್ನೊಂದೆಡೆ ಸರ್ಕಾರವು ಈ ನೀತಿಯ ಮೂಲಕ ದೊಡ್ಡ ಉದ್ಯಮಪತಿಗಳಿಗೆ, ಕಾರ್ಪೋರೇಟ್ ಮನೆತನಗಳಿಗೆ ಶಿಕ್ಷಣದಲ್ಲಿ ಬಂಡವಾಳ ಹೂಡಿ ಮತ್ತಷ್ಟು ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ.
ಕೇಂದ್ರ ಸರ್ಕಾರದ ಕಾರ್ಪೋರೇಟ್ ಪರ, ಜನ ವಿರೋಧಿ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿ ಎಐಡಿಎಸ್ಓ ಸಂಘಟಿಸಿದ್ದ ಸಹಿಸಂಗ್ರಹದಲ್ಲಿ ಇಡೀ ದೇಶದಾದ್ಯಂತ ಲಕ್ಷಾಂತರ ಸಹಿಗಳು ಸಂಗ್ರಹವಾಗಿವೆ. ದೇಶದ ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳು ತಮ್ಮ ಸಹಿ ನೀಡುವುದರ ಮೂಲಕ ಹೊಸ ಶಿಕ್ಷಣ ನೀತಿ-೨೦೨೦ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಖಾಯಿದೆಗಳು ಹಾಗೂ ರೈತ ವಿರೋಧಿ ಖಾಯಿದೆಗಳನ್ನು ವಿರೋಧಿಸಿ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಬೆಂಬಲ ವ್ಯಕ್ತಪಡಿಸುತ್ತದೆ. ಅಲ್ಲದೇ ಶಿಕ್ಷಣ ವಿರೋಧಿ, ಖಾಸಗೀಕರಣ, ವ್ಯಾಪಾರೀಕರಣ, ಕೋಮುವಾದೀಕರಣಕ್ಕೆ ಉತ್ತೇಜನ ನೀಡುವ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿ ಇಂದು ಭಾರತದ ಮೂಲೆಮೂಲೆಯಲ್ಲೂ ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ” ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಎಐಡಿಎಸ್ಓ ಅಖಿಲ ಭಾರತ ಉಪಾಧ್ಯಕ್ಷರಾದ ಕಾಮ್ರೇಡ್ ಎನ್.ಪ್ರಮೋದ್, ಎಐಎಮ್ಎಸ್ಎಸ್ನ ಜಿಲ್ಲಾಧ್ಯಕ್ಷರಾದ ಎ.ಶಾಂತಾ, ಸದಸ್ಯರಾದ ರೇಖಾ, ವಿದ್ಯಾ, ಎಐಡಿಎಸ್ಓ ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಈರಣ್ಣ.ಕೆ, ಶಾಂತಿ ಹಾಗೂ ಎಐಡಿವೈಓ ನ ಉಪಾಧ್ಯಕ್ಷರಾದ ಕೋಳೂರು ಪಂಪಾಪತಿ, ರ್ರಿಸ್ವಾಮಿ ಮತ್ತಿತರ ಕಾರ್ಯಕರ್ತರು, ವಿದ್ಯಾರ್ಥಿ-ಯುವಜನ-ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.