ನೂತನ ಸಿಎಂ ಫಡ್ನವಿಸ್, ಡಿಸಿಎಂ ಅಜಿತ್ ಪವಾರ್ ಗೆ ಪ್ರಧಾನಿ, ಶಾ ಅಭಿನಂದನೆ

ನೂತನ ಸಿಎಂ ಫಡ್ನವಿಸ್, ಡಿಸಿಎಂ ಅಜಿತ್ ಪವಾರ್ ಗೆ ಪ್ರಧಾನಿ, ಶಾ ಅಭಿನಂದನೆ

ನವದೆಹಲಿ :ಮಹಾರಾಷ್ಟ್ರ ರಾಜಕೀಯದಲ್ಲಿ ರಾತ್ರೋರಾತ್ರಿ ಕ್ಷಿಪ್ರ ಮತ್ತು ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಸಂಭವಿಸಿದ್ದು ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ, ಎನ್ ಸಿ ಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭಿನಂದನೆ ಸಲ್ಲಿಸಿ ಮಹಾರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಇಬ್ಬರೂ ನಂಬಿಕೆ, ವಿಶ್ವಾಸದಿಂದ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಿ ಮಹಾರಾಷ್ಟ್ರಕ್ಕೆ ಹೊಸ ಭವಿಷ್ಯ ಕಟ್ಟಿಕೊಡಲು ಇಬ್ಬರು ನಾಯಕರೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇಬ್ಬರನ್ನೂ ಅಭಿನಂದಿಸಿ, ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಮೈತ್ರಿ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇವೇಂದ್ರ ಫಡ್ನವಿಸ್ ರಾಜ್ಯದ 19 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಾರಿ ಮುಖ್ಯಮಂತ್ರಿ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಈ ಮೊದಲು ಶಿವಸೇನೆ, ಕಾಂಗ್ರೆಸ್, ಎನ್ ಸಿ ಪಿ ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿತ್ತು. ಇದಕ್ಕಾಗಿ ಎಲ್ಲಾ ಮಾತುಕತೆ, ವೇದಿಕೆ ಕೂಡ ಸಿದ್ಧವಾಗಿತ್ತು. ಇನ್ನೇನು ರಾಜ್ಯಪಾಲರನ್ನು ಭೇಟಿ ಮಾಡಿ ಅನುಮತಿ ಪಡೆದು ಹೊಸ ಸರ್ಕಾರ ರಚನೆಯ ಉಮೇದಿನಲ್ಲಿದ್ದ ಉದ್ಧವ ಠಾಕ್ರೆ ಅವರಿಗೆ ಈ ಬೆಳವಣಿಗೆ ಅತ್ಯಂತ ನಿರಾಸೆ ತಂದಿದೆ.

ಚುನಾವಣಾ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆಯುತ್ತಾ ಬಂದಿದ್ದರೂ ಮಹಾರಾಷ್ಟ್ರದಲ್ಲಿ ಯಾವುದೇ ಒಂದು ಪಕ್ಷ ಸರ್ಕಾರ ರಚನೆ ಮಾಡಲು ಸಾಧ್ಯವಾಗದೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು.

ಮಹತ್ವದ ಮತ್ತು ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ, ಎನ್ ಸಿ ಪಿ ಮೈತ್ರಿ ಸರ್ಕಾರ ರಚನೆಯಾಗಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ, ಎನ್ ಸಿ ಪಿ ಮುಖಂಡ ಶರದ್ ಪವಾರ್ ಅವರನ್ನು ಹಾಡಿ ಹೊಗಳಿದ್ದರು. ರಾಜಕೀಯದ ಚಾಣಾಕ್ಷ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.