ಐಸಿಸಿ ಟೆಸ್ಟ್ ಶ್ರೇಯಾಂಕ:   ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಅಗರ್ವಾಲ್, ಶಮಿ

ಐಸಿಸಿ ಟೆಸ್ಟ್ ಶ್ರೇಯಾಂಕ: ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಅಗರ್ವಾಲ್, ಶಮಿ

ದುಬೈ: ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ, ಇನಿಂಗ್ಸ್ ಹಾಗೂ 130 ರನ್ ಜಯ ಸಾಧಿಸುವಲ್ಲಿ ನೆರವಾಗಿದ್ದ ಆರಂಭಿಕ ಮಯಾಂಕ್ ಅಗರ್ವಾಲ್ ಹಾಗೂ ವೇಗಿ ಮೊಹಮ್ಮದ್ ಶಮಿ ಅವರು ಭಾನುವಾರ ಬಿಡುಗಡೆಯಾಗಿರುವ ಐಸಿಸಿ ಶ್ರೇಯಾಂಕದಲ್ಲಿ ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆದಿದ್ದಾರೆ.

ಮಿಂಚಿನ ದಾಳಿ ನಡೆಸಿದ್ದ ಮೊಹಮ್ಮದ್ ಶಮಿ ಮೊದಲನೇ ಇನಿಂಗ್ಸ್‍ನಲ್ಲಿ 37 ಕ್ಕೆ? 3 ಹಾಗೂ ಎರಡನೇ ಇನಿಂಗ್ಸ್ ನಲ್ಲಿ 31 ಕ್ಕೆ 4 ವಿಕೆಟ್ ಪಡೆದುಕೊಂಡಿದ್ದರು. ಶ್ರೇಯಾಂಕ ದಲ್ಲಿ ಎಂಟು ಸ್ಥಾನ ಏರಿಕೆ ಕಂಡಿರುವ ಶಮಿ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಅಲ್ಲದೇ, ಕಪಿಲ್ ದೇವ್ (877), ಜಸ್ಪ್ರಿತ್ ಬುಮ್ರಾ (832) ಬಳಿಕ ಮೊಹಮ್ಮದ್ ಶಮಿ(790) ಅತಿ ಹೆಚ್ಚು ಅಂಕ ಪಡೆದ ಭಾರತದ ಮೂರನೇ ಬೌಲರ್ ಎಂಬ ಗೌರವಕ್ಕೆ ಭಾಜನರಾದರು.
ಪ್ರಥಮ ಇನಿಂಗ್ಸ್ ದೀರ್ಘ ಕಾಲ ಬ್ಯಾಟಿಂಗ್ ಮಾಡಿದ್ದ ಕರ್ನಾಟಕದ ಮಾಯಾಂಕ್ ಅಗರ್ವಾಲ್ 243 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. 28ರ ಪ್ರಾಯದ ಬಲಗೈ ಬ್ಯಾಟ್ಸ್‍ಮನ್ ಎಂಟು ಟೆಸ್ಟ್ ಪಂದ್ಯಗಳಿಂದ 858 ರನ್ ಕಲೆ ಹಾಕಿದ್ದಾರೆ. ಶ್ರೇಯಾಂಕದಲ್ಲಿ 691 ಅಂಕಗಳನ್ನು ಪಡೆಯುವ ಮೂಲಕ 11ನೇ ಸ್ಥಾನಕ್ಕೇರಿದ್ದಾರೆ.

ವೃತ್ತಿ ಜೀವನದಲ್ಲಿ ಆಡಿದ ಮೊದಲ ಎಂಟು ಪಂದ್ಯಗಳಿಂದ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಳನೇ ಬ್ಯಾಟ್ಸ್‍ಮನ್ ಆಗಿ ಮಯಾಂಕ್ ಅಗರ್ವಾಲ್ ಹೊರಹೊಮ್ಮಿದ್ದಾರೆ. ಡಾನ್ ಬ್ರಾಡ್ಮನ್ (1210) ಅಗ್ರ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಎವೆರ್ಟನ್ ವೀಕ್ಸ್ (968), ಸುನೀಲ್ ಗವಾಸ್ಕರ್ (938), ಮಾರ್ಕ್ ಟೇಲರ್ (906), ಜಾರ್ಜ್ ಹೆಡ್ಲಿ (904), ಫ್ರಾಂಕ್ ವೊರೆಲ್ (890) ಹಾಗೂ ಹೆಬರ್ಟ್ (872 ) ಇದ್ದಾರೆ.
ಐಸಿಸಿ ಶ್ರೇಯಾಂಕದಲ್ಲಿ ಭಾರತದ ಪಾಲಿಗೆ ಮತ್ತೊಂದು ಮಹತ್ತರ ಬದಲಾವಣೆ ಎಂದರೆ ರವೀಂದ್ರ ಜಡೇಜಾ ಬ್ಯಾಟಿಂಗ್ ವಿಭಾಗದಲ್ಲಿ ನಾಲ್ಕು ಸ್ಥಾನ ಜಿಗಿದು ಲಬುಸ್‍ಚಗ್ನೆ ಅವರೊಂದಿಗೆ 35ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವೇಗಿಗಳಾದ ಇಶಾಂತ್ ಶರ್ಮಾ (20) ಹಾಗೂ ಉಮೇಶ್ ಯಾದವ್ (22) ಅವರು ಒಂದೊಂದು ಸ್ಥಾನ ಏರಿಕೆ ಕಂಡಿದ್ದಾರೆ.

ಆಫ್ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಬೌಲಿಂಗ್ ವಿಭಾಗದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಆಲ್‍ರೌಂಡರ್ ವಿಭಾಗದಲ್ಲಿ ಮತ್ತೇ ನಾಲ್ಕನೇ ಸ್ಥಾನಕ್ಕೆ ಮರಳಿದ್ದಾರೆ.

ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್ ಅವರು 43 ಹಾಗೂ 64 ರನ್ ಸಿಡಿಸಿದ ಫಲವಾಗಿ ಐದು ಸ್ಥಾನಗಳಲ್ಲಿ ಜಿಗಿದು 30ನೇ ಶ್ರೇಯಾಂಕ ಪಡೆದಿದ್ದಾರೆ. ಲಿಟನ್ ದಾಸ್ 92 ರಿಂದ 86ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ನಾಲ್ಕು ವಿಕೆಟ್ ಕಿತ್ತ ಅಬು ಝಾಯೆದ್ 18 ಸ್ಥಾನಗಳಲ್ಲಿ ಏರಿಕೆ ಕಂಡು 62ನೇ ಶ್ರೇಯಾಂಕ ಪಡೆದರು. ಇದು ಕೇವಲ ಆರು ಟೆಸ್ಟ್ ಪಂದ್ಯಗಳಿಂದ ಎನ್ನವುದು ವಿಶೇಷ.

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಣಕಪಟ್ಟಿಯಲ್ಲಿ 300 ಅಂಕ ಕಲೆ ಹಾಕಿದ ವಿಶ್ವದ ಮೊದಲ ತಂಡವಾಗಿ ಶನಿವಾರ ಹೊರಹೊಮ್ಮಿದೆ. ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ 60 ಅಂಕಗಳೊಂದಿಗೆ ಎರಡು ಮತ್ತುಮೂರನೇ ಸ್ಥಾನದಲ್ಲಿವೆ. ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆ?ಂಡ್ ತಂಡಗಳಿವೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.