ಭೀಮಾನದಿಯಲ್ಲಿ ಮುಂದುವರೆದ ಪ್ರವಾಹ

Share on facebook
Share on twitter
Share on linkedin
Share on whatsapp
Share on email

ಕಲಬುರಗಿ: ಜಿಲ್ಲೆಯ ಭೀಮಾನದಿಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ತೊಂದರೆಗೊಳಗಾದ ಗ್ರಾಮಗಳಿಗೆ ಜಿಲ್ಲಾಡಳಿತ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದ್ದಾರೆ.
ಪ್ರವಾಹ ಹಿನ್ನೆಲೆಯಲ್ಲಿ ಮಧ್ಯರಾತ್ರಿ ತಮ್ಮ ಕಾರ್ಯಾಲಯದಲ್ಲಿ ಸಭೆ ನಡೆಸಿದ ಅವರು, ಆಯಾ ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮುಂತಾದವರ ಮೂಲಕ ಗ್ರಾಮಗಳ ಜನರ ತುರ್ತು ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.


ಪ್ರವಾಹಕ್ಕೀಡಾಗುವ ಸಂಭವವಿರುವ ಜೇವರ್ಗಿ, ಚಿತ್ತಾಪುರ, ಅಫಜಲಪುರ, ಕಲಬುರಗಿ, ಶಹಬಾದ್ ಹಾಗೂ ಕಾಳಗಿ ತಾಲೂಕುಗಳಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಆಯಾ ತಾಲ್ಲೂಕಿನ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದರು.
ಕಳೆದ ವರ್ಷದ ನೆರೆ ಹಾವಳಿ ಹಾಗೂ ನಕ್ಷೆಯನ್ನು ಪರಿಶೀಲಿಸಿ 150 ಹಳ್ಳಿಗಳ ಗ್ರಾಮದ ಜನರ ಸ್ಥಳಾಂತರಕ್ಕೆ ಸೂಚಿಸಲಾಗಿದ್ದು, ಸ್ಥಳಕ್ಕೆ ತೆರಳಿರುವ ಅಧಿಕಾರಿಗಳು ಅಲ್ಲಿಯ ಪರಿಸ್ಥಿತಿ ಅವಲೋಕಿಸಿ ಕ್ರಮಕೈಗೊಳ್ಳಲಿದ್ದಾರೆ. ಒಟ್ಟು 27 ಅಧಿಕಾರಿಗಳನ್ನು ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನಿಯೋಜಿಸಿದ್ದು, ಈಗಾಗಲೇ ಎಲ್ಲಾ ಅಧಿಕಾರಿಗಳನ್ನು ಆಯಾ ಗ್ರಾಮಗಳಿಗೆ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು.


ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು 4 ರಿಂದ 6 ಹಳ್ಳಿಗಳ ಉಸ್ತುವಾರಿ ನೋಡಿಕೊಳ್ಳಲಿದ್ದು, ಕಾಳಜಿ ಕೇಂದ್ರ, ರಕ್ಷಣಾ ಕಾರ್ಯ ಮುಂತಾದವುಗಳ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದರು.
ಸ್ಥಳ ತಲುಪಿದ ಕೂಡಲೇ ಅಧಿಕಾರಿಗಳು ವಾಟ್ಸಪ್ ಮೂಲಕ ಲೋಕೇಶನ್ ಹಂಚಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಉಡುಪಿ, ಬಳ್ಳಾರಿ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಬೋಟ್ ಗಳು ಹಾಗೂ ರಕ್ಷಣಾ ತಂಡಗಳನ್ನು ಕರೆಸಿಕೊಳ್ಳಲಾಗುತ್ತಿದೆ. ದಾವಣಗೆರೆಯಿಂದ ಹಾಗೂ ಮಂಗಳೂರಿನಿಂದ ಎಸ್ ಡಿ ಆರ್ ಎಫ್ ತಂಡ ಬರಲಿವೆ ಎಂದರು.


ಈಗಾಗಲೇ ಜಿಲ್ಲೆಯ 8 ಕಡೆ ಅಗ್ನಿಶಾಮಕ ಇಲಾಖೆಯ ಜಲವಾಹನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಫಜಲಪುರ ತಾಲ್ಲೂಕಿನ ಘತ್ತರಗಾ, ದೇವಲಗಾಣಗಪೂರ, ಜೇವರ್ಗಿಯ ನೆಲೋಗಿ, ಕಟ್ಟಿ ಸಂಗಾವಿ, ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ, ಚಿತ್ತಾಪುರದ ಕಡಬೂರ, ಸೇಡಂ ತಾಲ್ಲೂಕಿನ ಮಳಖೇಡ ಹಾಗೂ ಶಹಾಬಾದ್ ಗಳಲ್ಲಿ ಅಗ್ನಿಶಾಮಕ ವಾಹನ ಸನ್ನದ್ಧ ಸ್ಥಿತಿಯಲ್ಲಿ ಇಲಾಗಿದೆ ಎಂದು ಹೇಳಿದರು.
ಎನ್ ಡಿ ಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಮಗ್ನವಾಗಿದ್ದು,ಅಗತ್ಯ ವಿದ್ದಲ್ಲಿ ಇನ್ನೂ ಎರಡು ತಂಡಗಳನ್ನು ಕರೆಸಿಕೊಳ್ಳಲಾಗುವುದು ಎಂದರು.
ಇನ್ನು, ಬೀದರ್ ವಾಯುನೆಲೆಯಲ್ಲಿ ಕಲಬುರಗಿ ಜಿಲ್ಲೆಯ ನೆರೆ ಸಂತ್ರಸ್ತರ ರಕ್ಷಿಸಲೆಂದೇ 2 ಹೆಲಿಕಾಪ್ಟರ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಡಲಾಗಿದೆ. ಅಗತ್ಯವಿದ್ದಾಗ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter