ಲಾಕ್‍ಡೌನ್ ಸಮಯವನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಿದ್ದಾರೆ ರಕ್ಷಿತ್ ಶೆಟ್ಟಿ

Share on facebook
Share on twitter
Share on linkedin
Share on whatsapp
Share on email

ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರವು ತೆರೆಕಂಡ ಬಳಿಕ ‘777 ಚಾರ್ಲಿ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಶ್ವಾನಪ್ರೇಮ ಕುರಿತ ಈ ಸಿನಿಮಾದ ಮೇಲೆ ರಕ್ಷಿತ್ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದ್ದು, 15 ದಿನ ಚಿತ್ರೀಕರಣ ಬಾಕಿ ಇದೆ. ಸದ್ಯ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಈ ಮಧ್ಯೆ ರಕ್ಷಿತ್ ಶೆಟ್ಟಿ ಲಾಕ್‍ಡೌನ್ ಸಮಯವನ್ನು ಬಹಳ ಉತ್ತಮವಾಗಿ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ, ಅವರೀಗ ಏನು ಮಾಡುತ್ತಿದ್ದಾರೆ? ‘ಪುಣ್ಯಕೋಟಿ’ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

‘ಅವನೇ ಶ್ರೀಮನ್ನಾರಾಯಣ’ ತೆರೆಗೆ ಬರುವ ಹೊತ್ತಿಗೆ ತಮ್ಮ ಮುಂದಿನ ಸಿನಿಮಾ ‘ಪುಣ್ಯಕೋಟಿ’ ಅಂತ ರಕ್ಷಿತ್ ಘೋಷಣೆ ಮಾಡಿದ್ದರು. ವಿಶೇಷವೆಂದರೆ, ಆರು ವರ್ಷಗಳ ನಂತರ ಈ ಸಿನಿಮಾ ಮೂಲಕ ಪುನಃ ನಿರ್ದೇಶನಕ್ಕೆ ಇಳಿಯುವ ನಿರ್ಧಾರ ಮಾಡಿದ್ದರು. ಸದ್ಯ ‘ಪುಣ್ಯಕೋಟಿ’ ಸ್ಕ್ರಿಪ್ಟ್ ಕೆಲಸಗಳು ಬಿರುಸಿನಿಂದ ಸಾಗಿವೆ. ‘ಈ ಸಮಯದಲ್ಲಿ ಕೆಲ ಸಿನಿಮಾಗಳನ್ನು ನೋಡಿದೆ. ಸಾಕಷ್ಟು ಪುಸ್ತಕಗಳನ್ನು ಓದಿದೆ. ಸದ್ಯ ಸ್ಕ್ರಿಪ್ಟ್ ಅನ್ನು ಬರೆಯುವುದು ಮತ್ತು ತಿದ್ದುವುದು ನಡೆಯುತ್ತಿದೆ. ಈವರೆಗೂ 40 ಪುಟಗಳಷ್ಟು ಬರೆದಿದ್ದೇನೆ. ಇನ್ನೂ 50 ಪುಟ ಬರೆಯವುದಿದೆ. ಈ ಲಾಕ್‍ಡೌನ್ ಸಮಯವನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ ಅವರು.

‘777 ಚಾರ್ಲಿ’ ಶೂಟಿಂಗ್ ಮುಗಿದ ಮೇಲೆ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ರಕ್ಷಿತ್ ಕೈಗೆತ್ತಿಕೊಳ್ಳಲಿದ್ದಾರೆ. ಆದಾದ ಮೇಲೆ ಪಿ.ಎ. ರಾಹುಲ್ ನಿರ್ದೇಶನ ಮಾಡಲಿರುವ ‘ರಿಚ್ಚಿ’ ಸಿನಿಮಾದಲ್ಲೂ ನಟಿಸಲಿದ್ದಾರೆ. ನಂತರ ತಮ್ಮದೇ ನಿರ್ದೇಶನದ ‘ಪುಣ್ಯಕೋಟಿ’ ಶುರು ಮಾಡಲಿದ್ದಾರೆ. ಸದ್ಯ ಒಬ್ಬನೇ ಕುಳಿತು ಸ್ಕ್ರಿಪ್ಟ್ ಬರೆಯುವುದನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ.

‘ಒಬ್ಬನೇ ಕುಳಿತು ಸ್ಕ್ರಿಪ್ಟ್ ಬರೆಯುವುದು ಖುಷಿ ನೀಡುತ್ತಿದೆ. ಬಹಳ ವರ್ಷಗಳ ಹಿಂದೆ, ಸಿಂಪಲ್ಲಾಗ್ ‘ಒಂದ್ ಲವ್ ಸ್ಟೋರಿ’ ಮಾಡೋದಕ್ಕೂ ಮೊದಲು ನನ್ನ ಸ್ನೇಹಿತರ ಜೊತೆ ರೂಮ್‍ನಲ್ಲಿದ್ದೆ. ಆಗ ಅವರೆಲ್ಲ ಕೆಲಸಕ್ಕೆ ಹೋದಾಗ ನಾನು ಒಬ್ಬನೇ ರೂಮ್‍ನಲ್ಲಿರುತ್ತಿದ್ದೆ. ಈಗ ಅದೇ ಅನುಭವ ಆಗುತ್ತಿದೆ’ ಎಂದು ಹೇಳಿಕೊಳ್ಳುತ್ತಾರೆ ಅವರು. ಆ ಸಂದರ್ಭದಲ್ಲೇ ಅವರು ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ಮೊದಲ ಹಂತದ ಸ್ಕ್ರಿಪ್ಟ್ ಅನ್ನು ಬರೆದಿದ್ದರಂತೆ! ಸದ್ಯ ಬರೆಯುತ್ತಿರುವ ‘ಪುಣ್ಯಕೋಟಿ’ ಚಿತ್ರದ ಸ್ಕ್ರಿಪ್ಟ್ ಕೂಡ ಬಹಳ ಉತ್ತಮವಾಗಿ ಮೂಡಿಬರುತ್ತಿದೆಯಂತೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *