ನಿರ್ದೇಶಕ ಎ.ಪಿ ಅರ್ಜುನ್ ಆ್ಯಕ್ಷನ್-ಕಟ್ ಹೇಳಿರುವ ‘ಕಿಸ್’ (ಕೀಪ್ ಇಟ್ ಸಿಂಪಲ್ ಸ್ವೀಟ್) ಸಿನಿಮಾ ಸದ್ಯ ಭರ್ಜರಿಯಾಗಿಯೇ ಸೌಂಡ್ ಮಾಡುತ್ತಿದೆ. ಈಗಾಗಲೇ ತನ್ನ ಸುಂದರವಾದ ಮೂರು ಹಾಡುಗಳು ಮತ್ತು ಟ್ರೇಲರ್ನಿಂದ ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ನಿನ್ನೆಯಷ್ಟೇ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ‘ಕಣ್ಣನೀರಿದು.. ಜಾರುತಾ ಇದೆ.. ನೀನು ಇಲ್ಲದೇ.. ತುಂಬಾ ನೋವಾಗಿದೆ…’ ಎಂಬ ಸಾಲುಗಳಿರುವ ಈ ಗೀತೆ ನಿಜವಾದ ಪ್ರೇಮಿಗಳಿಗೆ, ಪ್ರೀತಿಯಲ್ಲಿ ಸೋತವರಿಗೆ ಹೇಳಿ ಮಾಡಿಸಿದಂತಿದೆ.
ಕಿಸ್ ಬಿಡುಗಡೆಗೆ ತಯಾರಿ ಜೋರಾಗಿಯೇ ನಡೆದಿದ್ದು, ಇದೇ ಸೆ. 27 ರಂದು ರಾಜ್ಯಾದ್ಯಂತ ಕಿಸ್ ಕೊಡಲು ಚಿತ್ರಮಂದಿರಗಳಿಗೆ ಬರಲಿದೆ. ಚಿತ್ರವನ್ನು ಈ ಹಿಂದೆ ವಿ. ರವಿಕುಮಾರ್ ತಮ್ಮ ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ಆರಂಭಿಸಿದ್ದರು. ಈಗ ನಿರ್ದೇಶಕ ಎ.ಪಿ ಅರ್ಜುನ್ ತಮ್ಮದೇ ಎ.ಪಿ ಅರ್ಜುನ್ ಫಿಲಂಸ್’ ಬ್ಯಾನರ್ಗೆ ಪಡೆದಿದ್ದಾರೆ.
ತುಂಟ ತುಟಿಗಳ ಆಟೋಗ್ರಾಫ್’ ಎಂದು ಅಡಿ ಬರಹದಲ್ಲಿ ಹೇಳಿಕೊಂಡಿರುವ ಕಿಸ್ ಸದ್ಯ ಸ್ಯಾಂಡಲ್ವುಡ್ನಲ್ಲಿ ಕಿಕ್ಕೇರಿಸುತ್ತಿದೆ. ನಿರ್ದೇಶಕ ಎ.ಪಿ ಅರ್ಜುನ್ ಈ ವರೆಗೆ ನಿರ್ದೇಶಿಸಿರುವ ನಾಲ್ಕು ಸಿನಿಮಾಗಳಲ್ಲಿ ದರ್ಶನ್ ಅವರ ‘ಐರಾವತ’ ಬಿಟ್ಟರೆ ಮಿಕ್ಕ ‘ಅಂಬಾರಿ’, ‘ಅದ್ದೂರಿ’ ಮತ್ತು ‘ರಾಟೆ’ ಸಿನಿಮಾಗಳಲ್ಲಿ ಹೊಸ ಹೀರೋಗಳಿದ್ದರು. ಈಗ ಅರ್ಜುನ್ ತಮ್ಮ ನಿರ್ದೇಶನದ ಐದನೇ ಚಿತ್ರ ‘ಕಿಸ್’ಗೂ ಹೊಸ ಹೀರೋ ಹಾಗೂ ಹಿರೋಯಿನ್ ಆಯ್ಕೆ ಮಾಡಿಕೊಂಡು ಹೊಸಾ ಬಗೆಯ ಕಥೆಯೊಂದರ ಮೂಲಕ ದೊಡ್ಡ ಗೆಲುವೊಂದರ ರೂವಾರಿಯಾಗೋ ಹುರುಪಿನಲ್ಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ, ಶೀಲಾ ಸುಶೀಲಾ..',
ನೀನೆ ಮೊದಲು ನೀನೆ ಕೊನೆ..’ ಮತ್ತು ಪುನೀತ್ ರಾಜ್ ಕುಮಾರ್ ಹಾಡಿರುವ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ...’ ಹಾಡು ಎಲ್ಲೆಡೆ ಸಂಚಲನ ಸೃಷ್ಟಿಸಿವೆ. ಈ ಚಿತ್ರದ ಮೂಲಕ ನಾಯಕನಾಗಿ ಗಾಂಧಿನಗರಕ್ಕೆ ಏಂಟ್ರಿ ಕೊಡುತ್ತಿದ್ದಾರೆ ವಿರಾಟ್ ಎಂಬ ಯುವ ಪ್ರತಿಭೆ. ವಿರಾಟ್ ಮೂಲತಃ ಮೈಸೂರು ಹುಡುಗ. ‘ಜೊತೆಜೊತೆಯಲಿ’ ಧಾರಾವಾಹಿಯ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ರಂಗದಲ್ಲಿ ವಿರಾಟ್ಗೆ ಇದು ಮೊದಲ ಅನುಭವ. ಸಿನಿಮಾಗೆ ಎಂಟ್ರಿ ಕೊಡುತ್ತಿರುವುದರ ಪೂರ್ವಭಾವಿಯಾಗಿ ಮೂರು ತಿಂಗಳಿನಿಂದ ಡ್ಯಾನ್ಸ್, ಫೈಟ್ ಮತ್ತು ಜಿಮ್ ಅನ್ನು ನಿರಂತರವಾಗಿ ಅಭ್ಯಾಸ ಮಾಡಿದ್ದಾರೆ. ದುನಿಯಾ ವಿಜಿ, ಪ್ರೇಮ್, ಯಶ್ ಮುಂತಾದ ನಟರುಗಳನ್ನು ಕೋಚ್ ಆಗಿರುವ ಪಾನಿಪುರಿ ಕಿಟ್ಟಿ ಅವರೇ ವಿರಾಟ್ಗೂ ಜಿಮ್ ಗುರುಗಳಾಗಿದ್ದಾರೆ. ಈ ಚಿತ್ರದಲ್ಲಿ ವಿರಾಟ್ಗೆ ಜೋಡಿಯಾಗಿ ಶ್ರೀಲೀಲಾ ನಟಿಸಿದ್ದಾರೆ.
ಇವರಿಗೂ ಇದು ಮೊದಲ ಚಿತ್ರ. ಈ ಚಿತ್ರದ ನಂತರ ಶ್ರೀಲೀಲಾ ಈಗ ಶ್ರೀಮುರಳಿ ಅವರ ‘ಭರಾಟೆ’ಯಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು
ಕಿಸ್’ ಚಿತ್ರಕ್ಕೆ ನಟ ದೃವ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಕೆ. ರವಿವರ್ಮ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನ ಮತ್ತು ಗಿರೀಶ್ ಗೌಡ ಅವರ ಛಾಯಾಗ್ರಹಣವಿದೆ. ಈಗಾಗಲೇ ಹೊರಬಂದಿರುವ ಹಾಡುಗಳು ಕಿಸ್ನ ಕಿಕ್ ಏರಿಸಿದೆ. ಇಷ್ಟರಲ್ಲೇ ತೆರೆಮೇಲೆ ಬರುವ ಕಿಸ್ ಪ್ರೇಕ್ಷಕರಿಗೂ ಮಜಾ ನೀಡೋದು ಗ್ಯಾರೆಂಟಿ!