ಯಡಿಯೂರಪ್ಪ ಕೇಳಿದರೆ ಅರಣ್ಯ ಖಾತೆ ಬಿಟ್ಟು ಕೊಡಲು ಸಿದ್ಧ

ಯಡಿಯೂರಪ್ಪ ಕೇಳಿದರೆ ಅರಣ್ಯ ಖಾತೆ ಬಿಟ್ಟು ಕೊಡಲು ಸಿದ್ಧ

ಬೆಂಗಳೂರು,:ತಮ್ಮ ಮೇಲೆ ನೇರವಾಗಿ ಅರಣ್ಯ ನಾಶದ ಆರೋಪ ಇಲ್ಲ. ಯಾರದ್ದೋ ಪ್ರಕರಣದಲ್ಲಿ ಗುಂಪು ಆರೋಪಗಳ ಸಾಲಿನಲ್ಲಿ ನನ್ನ ಹೆಸರಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅರಣ್ಯ ಖಾತೆ ಹಿಂಪಡೆಯಲು ಬಯಸಿದರೆ ಬಿಟ್ಟು ಕೊಡಲು ಸಿದ್ಧ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಗಣಿಗಾರಿಕೆ ಆರೋಪ ಹೊತ್ತಿರುವ ಆನಂದ್ ಸಿಂಗ್‌ಗೆ ಅರಣ್ಯ ಖಾತೆ ನೀಡಿದ್ದು ಸರಿಯಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರ ಟೀಕೆಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದರು.

ರಾಜಕೀಯ ಪಿತೂರಿಯ ಕಾರಣ ತಮ್ಮ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ತಾವು ಯಾವುದೇ ಗಣಿ ಕಂಪೆನಿಯ ಮಾಲೀಕನಲ್ಲ. ಈ ಕುರಿತು ಚುನಾವಣಾ ಆಯೋಗಕ್ಕೂ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ಗಣಿ ಕಂಪೆನಿಯ ಎಂಟು ಜನರಲ್ಲಿ ತಮ್ಮ ತಂದೆ ಕೂಡ ಒಬ್ಬರು. ತಂದೆ ನಿವೃತ್ತಿ ಬಳಿಕ ಆ ಕೆಲಸ ವಹಿಸಿಕೊಂಡಿದ್ದೇನಷ್ಟೆ. ಬೌಂಡರಿ ಕಲ್ಲು ತೆಗೆದೆ, ಮರ ಕಡಿದೆ ಎಂದು‌ ವಿನಾ ಕಾರಣ ಆರೋಪ ಮಾಡಲಾಗಿದೆ.

ಹಿಂದಿನಿಂದಲೂ ಹಿರಿಯರು ಗಣಿಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಅಪಘಾತದ ನಂತರ ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಬೇಕು. ಆದರೆ ಚಾಲಕ ಮಾಡಿದ ತಪ್ಪಿಗೆ ಮಾಲೀಕನ ಮೇಲೆ ಕೇಸು ಹಾಕಿದರೆ ಹೇಗೆ?ಎಂದು ಪ್ರಶ್ನಿಸಿದರು.

ಖಾತೆ ಬದಲಾವಣೆ ಮಾಡುವುದಾದರೆ ಮಾಡಲಿ. ಇದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯ ಅವರಿಗೆ ರಾಜಕೀಯದಲ್ಲಾಗಿರುವ ಅನುಭವದಷ್ಟೂ ತಮಗೆ ವಯಸಾಗಿಲ್ಲ. ಅವರು ಬೆಳೆದಷ್ಟು ತಾವು ಬೆಳೆಯಲು ಆಗುವುದಿಲ್ಲ. ಅವರ ಮಾತುಗಳಿಗೆ ಉತ್ತರ ನೀಡುವಷ್ಟು ದೊಡ್ಡವ ನಾನಲ್ಲ ಎಂದು ಮಾರ್ಮಿಕವಾಗಿ ನುಡಿದರು.


ದೇವರಿದ್ದಾನೆ, ನ್ಯಾಯಾಲಯ ಮೇಲೆ ನಂಬಿಕೆ ಇದೆ.ತಮ್ಮ ಮೇಲೆ ಆರೋಪ ಇರುವುದು ನಿಜ,. ತಪ್ಪು ಮಾಡಿದ ಮೇಲೆ ಬದಲಾಗಬಾರದೇ?. ತಪ್ಪು ಮಾಡಿದವನು ಹಾಗೆಯೇ ಇರಬೇಕೇ? ಮಹರ್ಷಿ ವಾಲ್ಮೀಕಿ ಬದಲಾಗಿ ರಾಮಾಯಣ ಬರೆದಿಲ್ಲವೇ? ಎಂದರು.

ಪ್ರತಿಪಕ್ಷ ನಾಯಕರ ಆರೋಪ ಸರಿಯಾಗಿದ್ದು, ತಮ್ಮ ಮೇಲೆ 15 ಪ್ರಕರಣಗಳು ದಾಖಲಾಗಿರುವುದು ನಿಜ. ರಾಜ್ಯದ ಜನರನ್ನು ಕತ್ತಲೆಯಲ್ಲಿ ಇಡುವುದಿಲ್ಲ. ಅವರೆಲ್ಲ ತಮ್ಮ ಮೇಲೆ ದಾಖಲಿಸಿರುವ ಆರೋಪಪಟ್ಟಿಯನ್ನು ಪರಿಶೀಲಿಸಲಿ. ನೇರವಾದ ಆರೋಪ ಇದ್ದರೆ ಹೇಳಲಿ. ತಮ್ಮಿಂದ ರಾಜ್ಯದ ಅರಣ್ಯ ಲೂಟಿ ಆಗುತ್ತದೆ ಎಂದು ಭಾವಿಸಿ ಯಡಿಯೂರಪ್ಪ ತಮ್ಮ ಖಾತೆಯನ್ನು ಬದಲಾವಣೆ ಮಾಡಿದರೆ ಅದಕ್ಕೆ ತಾವು ಸಿದ್ಧ. ಖಾತೆ ಬದಲಿಸುವುದಾದರೆ ಬದಲಿಸಿ ಎಂದರು.

ಬಳ್ಳಾರಿ ಜಿಲ್ಲೆ ಉಸ್ತುವಾರಿಗೆ ಕೇಳಿಲ್ಲ.ಶ್ರೀರಾಮುಲು ಅವರೇ ಉಸ್ತುವಾರಿ ಸಚಿವರಾಗಿರಬೇಕು ಎಂದು ಹೇಳಿದ್ದೇನೆ ಎಂದು ಆನಂದ್ ಸಿಂಗ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.