ಬೆಳಗಾಯಿತು ವಾರ್ತೆ
ಹಾವೇರಿ: ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದೆ. ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಶ್ರೀವಿದ್ಯಾ ಅವರು ಹೇಳಿದರು.
ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾವಾದಿಗಳ ಸಂಘ, ಅಭಿಯೋಜಕರ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜ್ಞಾನ ಗಂಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಪ್ರಯುಕ್ತ ಕಡ್ಡಾಯ ಶಿಕ್ಷಣ ಹಕ್ಕು ಕುರಿತು ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯ ವಿತರಣೆ ಎಲ್ಲರಿಗೂ ಸಮಾನವಾಗಿ ಸಿಗಲೆಂದೇ ಉಚಿತ ಕಾನೂನು ಪ್ರಾಧಿಕಾರ ರಚನೆ ಮಾಡಲಾಗಿದೆ.ಇದಕ್ಕಾಗಿ ಅನುಚ್ಛೇದ 39(ಎ)ನಲ್ಲಿ ಒಂದು ಸರ್ಕಾರ ಎಲ್ಲಾ ಬಡಜರಿಗೆ ಉಚಿತ ಕಾನೂನು ಸೇವೆ ನೀಡುವುದು ಆಯಾ ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ನಿಟ್ಟಿನಲ್ಲಿ 1987ರಲ್ಲಿ ಮೊದಲ ಬಾರಿ ಉಚಿತ ಕಾನೂನು ಸೇವೆ ಜಾರಿಗೆ ಬಂದಿತು. ಆದರೆ. 1995 ನವೆಂಬರ 9ರಂದು ಕಾರ್ಯರೂಪಕ್ಕೆ ಬಂದಿತು. ಅಂದಿನಿಂದ ಉಚಿತ ಕಾನೂನು ಸೇವೆ ಪ್ರಾಧಿಕಾರವನ್ನು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ರಚನೆ ಮಾಡಿ ಉಚಿತ ಕಾನೂನು ಅರಿವು ಕಾರ್ಯ ನಡೆಯುತ್ತಿದೆ.ಇದರ ಸದುಪಯೋಗ ಪಡೆದುಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲರಾದ ಕುಮಾರಿ ರಾಜೇಶ್ವರಿ ಅವರು ರಾಷ್ಟ್ರೀಯ ಕಾನೂನು ಸೇವೆಗಳ ಕಾಯ್ದೆ ಕುರಿತು ಮತ್ತು ದೈಹಿಕ ಶಿಕ್ಷಣಾಧಿಕಾರಿಗಳಾದ ಎನ್.ಐ.ಇಚ್ಚಂಗಿ ಅವರು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ.ಸಿ.ಪಾವಲಿ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಗಳಾದ ಪಿ.ಎಂ ಬೆನ್ನೂರ, ಜಿಲ್ಲಾ ಅಭಿಯೋಜನಾ ಇಲಾಖೆಯ ಹಿರಿಯ ಸರ್ಕಾರಿ ಅಭಿಯೋಜಕರಾದ ಎಸ್.ಎಂ.ಗೆಜ್ಜಿಹಳ್ಳಿ, ಜ್ಞಾನ ಗಂಗಾ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ದಲಿಂಗೇಶ ನೀರಲಗಿ ಹಾಗೂ ವಿವಿ ಉಜ್ಜಯಿನಿ ಮಠ ಮತ್ತು ಜ್ಞಾನ ಗಂಗಾ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಾಲೆಯ ಕಾರ್ಯದರ್ಶಿ ಕೃಷ್ಣಾ ಪಿ. ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
2009ರಲ್ಲಿ ಭಾರತ ಸರ್ಕಾರ ಎಲ್ಲರಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಆರ್ಟಿಇಯನ್ನು ಜಾರಿಗೆ ತರಲಾಯಿತು. ನಮ್ಮ ಸಮಾಜದಲ್ಲಿ ಮಕ್ಕಳು ಶಿಕ್ಷಣ ವಂಚಿರಾಗಲು ಪ್ರಮುಖ ಕಾರಣ ಬಡತನ. ಸಾಕಷ್ಟು ಹಳ್ಳಿಗಳಲ್ಲಿ ಐದಾರು ವರ್ಷ ಕಳೆದ ಮಕ್ಕಳು ಪೋಷಕರ ಜವಾಬ್ದಾರಿ ಹೋರಲು ಮುಂದಾಗುತ್ತಿದ್ದಾರೆ. ಅಂಥ ಮಕ್ಕಳು ಕಂಡು ಬಂದಲ್ಲಿ ಅವರ ಪೋಷಕರಿಗೆ ತಿಳಿ ಹೇಳಿ ಮಕ್ಕಳನ್ನು ಶಾಲೆಯತ್ತ ಚಿತ್ತ ಹರಿಸುವಂತೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ – ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ