ಆರ್ಥಿಕ ಹಿಂಜರಿತ ಸ್ಥಿತಿಗೆ ಭಾರತ ..! ಆರ್ಥಿಕ ತಜ್ಞರ ಅಭಿಮತ

Share on facebook
Share on twitter
Share on linkedin
Share on whatsapp
Share on email

ಮುಂಬೈ: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಆರ್ಥಿಕ ಹಿಂಜರಿತ ಸ್ಥಿತಿಗೆ ಅಡಿ ಇರಿಸಲಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಜಿಡಿಪಿ ಬೆಳವಣಿಗೆ ಸತತ ಎರಡನೇ ತ್ರೈಮಾಸಿಕದಲ್ಲಿ ಕ್ಷೀಣಿಸಿದೆ. ಅಂದರೆ ಭಾರತ ಆರ್ಥಿಕ ವ್ಯವಸ್ಥೆ ಹಿಂಜರಿತಕ್ಕೆ ಜಾರಿದೆ ಎಂಬುದು ಆರ್‌ಬಿಐ ತಜ್ಞರ ಅಭಿಪ್ರಾಯವಾಗಿದೆ.
ಕೋವಿಡ್ ನಿಂದ ದೇಶಾದ್ಯಂತ ಲಾಕ್ ಡೌನ್ ವಿಧಿಸಿದ್ದ ಕಾರಣ, ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 23.9 ರಷ್ಟು ಕುಸಿದಿದೆ. ಆದರೆ, ಆರ್‌ಬಿಐ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಅಂಕಿ ಅಂಶಗಳ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಶೇ 8.6 ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಿತ್ತು. ಇದರಿಂದ ಭಾರತ ತಾಂತ್ರಿಕವಾಗಿ ಆರ್ಥಿಕ ಹಿಂಜರಿತದಲ್ಲಿ ಪ್ರವೇಶಿಸಿದೆ ಎಂದು ಹಣಕಾಸು ನೀತಿ ವಿಭಾಗದ ಪಂಕಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.


‘ಸತತ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿ ದರ ಕ್ಷೀಣಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಇದರೊಂದಿಗೆ, ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತಾಂತ್ರಿಕವಾಗಿ ಹಿಂಜರಿತವನ್ನು ಪ್ರವೇಶಿಸಿದೆ ಎಂದು “ಆರ್ಥಿಕ ಚಟುವಟಿಕೆ ಸೂಚ್ಯಂಕ” ಕುರಿತ ತಮ್ಮ ಲೇಖನದಲ್ಲಿ ಪಂಕಜ್ ಕುಮಾರ್ ಹೇಳಿದ್ದಾರೆ. ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳು ಮೊದಲಿನ ಸ್ಥಿತಿಗೆ ತಂದರೆ ಕ್ಷೀಣತೆಯನ್ನು ತಡೆಯಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಕಡೆ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ಪುನರಾಂಭಗೊಂಡಿರುವ ಕಾರಣ ಮೇ, ಜೂನ್ ತಿಂಗಳಲ್ಲಿ ಆರ್ಥಿಕ ವ್ಯವಸ್ಥೆ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಲೇಖನದಲ್ಲಿ ತಿಳಿಸಿದೆ.
ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶಗಳ ಅಂದಾಜಿಸಲು ಅರ್ಥಶಾಸ್ತ್ರಜ್ಞರು ಹಾಗೂ ಸಂಶೋಧಕರು ನೌಕಾಸ್ಟಿಂಗ್ ಎಂಬ ವಿಧಾನ ಬಳಸಿದ್ದಾರೆ. ಈ ವಿಧಾನದಲ್ಲಿ ವಿಭಿನ್ನ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ಈ ಊಹೆಗಳನ್ನು ಮಾಡಲಾಗಿದೆ. ಅರ್ಥಶಾಸ್ತ್ರಜ್ಞರ ಅಂದಾಜುಗಳನ್ನು ಆರ್‌ಬಿಐನ ಮಾಸಿಕ ಬುಲೆಟಿನ್ ನಲ್ಲಿ ಬುಧವಾರ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಇವುಗಳನ್ನು ಆರ್‌ಬಿಐ ದೃಷ್ಟಿಕೋನವೆಂದು ಪರಿಗಣಿಸಬಾರದು. ಆರ್‌ಬಿಐ ತನ್ನ ಎರಡನೇ ತ್ರೈಮಾಸಿಕ ಅಂಕಿಅಂಶಗಳು ಮತ್ತು ಅಂದಾಜುಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಅಧಿಕೃತ ಜಿಡಿಪಿ ಅಂಕಿಅಂಶಗಳು ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ 9.5 ರಷ್ಟು ಮಂದಗತಿ ಕಾಣಲಿದೆ ಎಂದು ಆರ್‌ಬಿಐ ಈ ಹಿಂದೆ ಮುನ್ಸೂಚನೆ ನೀಡಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter