ಹೊರನಾಡು, ಗಡಿನಾಡು ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುವಂತಾಗಲಿ

Share on facebook
Share on twitter
Share on linkedin
Share on whatsapp
Share on emailಬೆಂಗಳೂರು: ರಾಜ್ಯದೊಳಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಗಡಿಭಾಗದಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಒತ್ತಾಯಿಸಿದ್ದಾರೆ.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಆನ್ ಲೈನ್ (ಜಾಲ ಸಂಪರ್ಕ ಸಭೆ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು, ದೆಹಲಿ, ಮಹಾರಾಷ್ಟ್ರ ಇತ್ಯಾದಿ ರಾಜ್ಯದ ಗಡಿ ಭಾಗಗಳಲ್ಲಿ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ರಾಜ್ಯದೊಳಗೆ ಉನ್ನತ ಶಿಕ್ಷಣ ಪ್ರವೇಶಾತಿಯನ್ನು ಹಾಗೂ ವಿದ್ಯಾರ್ಥಿವೇತನ ನೀಡಲು ನಿರಾಕರಿಸಲಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಮತ್ತು ಹೊರರಾಜ್ಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕನ್ನಡದ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಹಾಯಧನ ನೀಡಲು ಇಲಾಖೆ ಮುಂದಾಗಬೇಕು ಎಂದು ಆಯುಕ್ತರಿಗೆ ಸೂಚಿಸಿದರು.
ಐಟಿ-ಬಿಟಿ ಸೇರಿದಂತೆ ಶೇ.95ರಷ್ಟು ಉದ್ಯೋಗಗಳು ಖಾಸಗಿ ವಲಯದಲ್ಲಿದ್ದು, ಆ ಕ್ಷೇತ್ರಕ್ಕೆ ಗ್ರಾಮೀಣ ಮಕ್ಕಳು ಆಯ್ಕೆಯಾಗುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಆ ಕ್ಷೇತ್ರಕ್ಕೆ ಬೇಕಾದ ಜ್ಞಾನ, ಕೌಶಲಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ತಳಸಮುದಾಯದ ವಿದ್ಯಾರ್ಥಿಗಳು ಉನ್ನತಿ ಹೊಂದಲು ಸಹಕಾರಿಯಾಲಿದೆ ಎಂದು ಅವರು ಹೇಳಿದರು.


ಇಲಾಖೆಯ ಜಾಲತಾಣದಲ್ಲಿ ಇ-ಪಾಸ್ ಇಂಗ್ಲಿಷ್ ನಲ್ಲಿದೆ ಹಾಗೂ ಕೆಲವು ಅಂತರ್ಜಾಲತಾಣದಲ್ಲಿ ತುಂಬುವ ಅರ್ಜಿಗಳು ಇಂಗ್ಲಿಷ್ ನಲ್ಲಿರುವುದನ್ನು ಗಮನಿಸಲಾಗಿದೆ. ಇವೆಲ್ಲ ಎಸ್.ಎಸ್.ಎಲ್.ಸಿ. ಓದಿದ ಗ್ರಾಮೀಣ ಭಾಗದ ಮಕ್ಕಳಿಗೆ ಅರ್ಥ ಆಗುವುದಿಲ್ಲ. ಆಗ ಅವಕಾಶದಿಂದ ವಂಚಿತರಾಗುವ ಸಾಧ್ಯಗಳಿರುವುದರಿಂದ ಕನ್ನಡದಲ್ಲೇ ಅರ್ಜಿ ತುಂಬಲು ಅವಕಾಶ ಮಾಡಿಕೊಡಬೇಕು. ಮತ್ತು ಗ್ರಾಮೀಣ ಭಾಗದ ಮತ್ತು ಕನ್ನಡಿಗರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಪಡೆದುಕೊಳ್ಳಲು ಬೇಕಾಗಿರುವ ಕೌಶಲ ತರಬೇತಿಯನ್ನು ನೀಡಬೇಕಿರುವುದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ ಅಧ್ಯಕ್ಷರು, ಇಲಾಖೆಯ ಜಾಲತಾಣದಲ್ಲಿ ಸಣ್ಣ-ಪುಟ್ಟ ದೋಷಗಳನ್ನು ಹೊರತುಪಡಿಸಿ,ಕನ್ನಡದಲ್ಲಿ ಆಡಳಿತ ನಡೆಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಹೊರನಾಡು, ಗಡಿನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿವೇತನ ನೀಡುತ್ತಿಲ್ಲ. ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿದರೆ ಇಲ್ಲಿಯೂ ಅವರಿಗೆ ಹೊರ ರಾಜ್ಯದಲ್ಲಿ ವ್ಯಾಸಾಂಗ ಮಾಡುತ್ತಿರುವ ಕಾರಣಕ್ಕೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ಈ ಬಗ್ಗೆ ಪ್ರಾಧಿಕಾರದ ಸೂಚನೆಯನ್ವಯ ಹಿಂದುಳಿದ ವರ್ಗಗಳ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದ್ದು, ಮಕ್ಕಳಿಗೆ ಎರಡು ಕಡೆಯಿಂದಲೂ ಯಾವುದೇ ವಿದ್ಯಾರ್ಥಿವೇತನ ಸಿಗದೆ ಅನ್ಯಾಯವಾಗುತ್ತಿದೆ. ಹಾಗಾಗಿ ಅವರಿಗೆ ರಾಜ್ಯ ಸರ್ಕಾರದಿಂದಲೇ ವಿದ್ಯಾರ್ಥಿವೇತನ ನೀಡಲು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಆಯುಕ್ತರಿಗೆ ಸೂಚಿಸಿದರು.


ಅಲ್ಲದೆ ಹೊರ ರಾಜ್ಯದಲ್ಲಿ 9 ಕನ್ನಡ ಅಧ್ಯಯನ ಪೀಠಗಳಿವೆ. ಅಲ್ಲಿ ವಿದ್ಯಾಭ್ಯಾಸ ಮಾಡಲು ಕರ್ನಾಟಕದ ವಿದ್ಯಾರ್ಥಿಗಳು ಹೋಗುತ್ತಾರೆ. ಅವರಿಗೂ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ಹೀಗಾದರೆ ಒಂದು ಕಣ್ಣಿಗೆ ಬೆಣ್ಣೆ; ಒಂದು ಕಣ್ಣಿಗೆ ಸುಣ್ಣ ಮಾಡಿದಂತಾಗುತ್ತದೆ. ಅವರು ನಮ್ಮ ಕನ್ನಡದ ಮಕ್ಕಳು ಎಂಬ ಸತ್ಯ ಅರಿತು ಅವರಿಗೆ ನಾವು ನ್ಯಾಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಾಗಾಭರಣ ಹೇಳಿದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಟಿ.ಎಚ್.ಎಂ. ಕುಮಾರ್ ಮಾತನಾಡಿ, ಗಡಿಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಸಂಬಂಧ ಆರ್ಥಿಕ ಇಲಾಖೆ ಸಲ್ಲಿಸಲಾದ ಪ್ರಸ್ತಾವನೆ ತಿರಸ್ಕೃತಗೊಂಡಿದ್ದು, ತಮ ಸಲಹೆ-ಸೂಚನೆ ಮೇರೆಗೆ ಮತ್ತೊಮ್ಮೆ ವಿಸ್ತೃತವಾದ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಾಧಿಕಾರದ ಸಲಹೆ-ಸೂಚನೆಗಳನ್ನು ಪಾಲಿಸಲಾಗುವುದು ಹಾಗೂ ಪ್ರಾಧಿಕಾರ ಪ್ರಸ್ತಾಪಿಸಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಓದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಭರವಸೆ ನೀಡಿದರು.


ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಪ್ರಾಧಿಕಾರದ ಸದಸ್ಯರಾದ ರೋಹಿತ್ ಚಕ್ರತೀರ್ಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾದ ಟಿ.ಎಚ್.ಎಂ. ಕುಮಾರ್, ಜಂಟಿ ನಿರ್ದೆಶಕರಾದ (ವಸತಿ ನಿಲಯ) ಜಿ. ಜಗದೀಶ್, ಜಂಟಿ ನಿರ್ದೇಶಕರಾದ (ಆಡಳಿತ) ಬಿ.ಎಸ್. ಪ್ರದೀಪ್, ಸಾಮಾಜಿಕ ಕಾರ್ಯಕರ್ತರಾದ ಅಶೋಕ್ ಹೆಗಡೆ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter