ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರು ಬಂದರೆ ತನಿಖೆ ಇಲ್ಲ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಬರುವ ಅನಾಮಧೇಯ ದೂರುಗಳ ಬಗ್ಗೆ ಕ್ರಮಕೈಗೊಳ್ಳುವಂತಿಲ್ಲ. ಪೂರ್ಣ ವಿಳಾಸ, ದಾಖಲೆ ಇದ್ದರೆ ಮಾತ್ರ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಮನವಿಯ ಮೇರೆಗೆ ಸರ್ಕಾರ ಈ ಆದೇಶ ಹೊರಡಿಸಿದೆ.


ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ದೂರುಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ. ಇಂತಹ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹ ಪೀಡಿತವಾಗಿರುತ್ತವೆ. ಅಲ್ಲದೇ ದೂರುಗಳಿಗೆ ಪೂರಕವಾದ ಮಾಹಿತಿ, ದಾಖಲೆಗಳನ್ನು ಸಾಮಾನ್ಯವಾಗಿ ಲಗತ್ತಿಸಿರುವುದಿಲ್ಲ. ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ, ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುವುದಲ್ಲದೇ ದಕ್ಷ ಮತ್ತು ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅವರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆಗಸ್ಟ್ 4ರಂದು ಮುಖ್ಯಮಂತ್ರಿಯವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಸಂಬಂಧ ನೀಡಿರುವ ಮನವಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರದ ಮಾದರಿಯಂತೆಯೇ ರಾಜ್ಯದಲ್ಲಿ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರು, ಪತ್ರಗಳ ಆಧಾರದ ಮೇಲೆ ತನಿಖೆಗೆ ಒಳಪಡಿಸದೆ, ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ ಪರಿಗಣಿಸಲು ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ, ಅಧಿಕಾರಿ, ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ಅರ್ಜಿಗಳ ಆಧಾರದ ಮೇಲೆ ಪ್ರಕರಣವನ್ನು ತನಿಖೆಗೆ , ವಿಚಾರಣೆಗೆ ಒಳಪಡಿಸದೇ ಅಂತಹ ದೂರು ಅರ್ಜಿಗಳನ್ನು ಕಡತಗೊಳಿಸಬೇಕೆಂದು ಸೂಚಿಸಿದೆ.


ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ, ವಿಚಾರಣೆಗೆ ಪರಿಗಣಿಸಲು ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳಿಗೆ ಹಾಗೂ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಅಂಶವನ್ನು ಸಂಬಂಧಪಟ್ಟ ಇಲಾಖೆಗಳು ತಮ್ಮ ಅಧೀನ ಕಚೇರಿಗಳಿಗೆ ತಿಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ವಿಜಯಭಾಸ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter