ಕೇಂದ್ರ ಸಚಿವ ಸಂಪುಟದಲ್ಲಿ ಕೇವಲ ಒಂದೇ ಮಿತ್ರ ಪಕ್ಷ !

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ ಮತ್ತು ಶಿರೋಮಣಿ ಅಕಾಲಿ ದಳದ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಈಗ 51 ಸದಸ್ಯ ಬಲದ ಕೇಂದ್ರ ಸಚಿವ ಸಂಪುಟದಲ್ಲಿ ಒಂದು ಸ್ಥಾನ ಹೊರತುಪಡಿಸಿ ಉಳಿದೆಲ್ಲಾ ಸ್ಥಾನಗಳು ಬಿಜೆಪಿ ಪಾಲಾಗಿವೆ.


ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಮ್ ದಾಸ್ ಅಠವಳೆ ಅವರು ಸಚಿವ ಸಂಪುಟದಲ್ಲಿರುವ ಏಕೈಕ ಬಿಜೆಪಿಯೇತರ ಸದಸ್ಯರಾಗಿದ್ದಾರೆ. ಅಠವಳೆ ಅವರು ಪ್ರಸ್ತುತ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿದ್ದಾರೆ.
1977 ರ ನಂತರ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿನ ಸಮ್ಮಿಶ್ರ ಸರ್ಕಾರದಲ್ಲಿ ಒಂದು ಸ್ಥಾನ ಹೊರತುಪಡಿಸಿ ಉಳಿದೆಲ್ಲಾ ಸ್ಥಾನಗಳು ಒಂದೇ ಪಕ್ಷದವರ ಪಾಲಾಗಿದೆ.


ಬಿಜೆಪಿ ನೇತೃತ್ವದ 24 ರಾಜಕೀಯ ಪಕ್ಷಗಳ ಮೈತ್ರಿಕೂಟವು 2019ರಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಮಿತ್ರ ಪಕ್ಷಗಳಿಗೆ ಕ್ಯಾಬಿನೆಟ್‌ನಲ್ಲಿ ಮೂರು ಸ್ಥಾನಗಳನ್ನು ನೀಡಲಾಗಿತ್ತು. ರಾಮ್‌ ವಿಲಾಸ್ ಪಾಸ್ವಾನ್ ಅವರಿಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಸರಬರಾಜು ಖಾತೆಯನ್ನು ನೀಡಲಾಗಿತ್ತು.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಶಿವಸೇನೆ ಎನ್ ಡಿಎ ತೊರೆದಿತ್ತು. ಈ ವೇಳೆ ಕೇಂದ್ರ ಸಚಿವ ಸ್ಥಾನಕ್ಕೆ ಶಿವಸೇನೆಯ ಅನಂತ್ ಗೀತೆ ರಾಜೀನಾಮೆ ನೀಡಿದ್ದರು. ಕಳೆದ ತಿಂಗಳು, ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹರ್ಸಿಮ್ರತ್ ಕೌರ್ ಬಾದಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲೋಕ ಜನಶಕ್ತಿ ಪಕ್ಷದ ವರಿಷ್ಠ ರಾಮ್ ವಿಲಾಸ್ ಪಾಸ್ವಾನ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ನಿಧನರಾದರು.


ಎನ್ ಡಿಎ ಭಾಗವಾಗಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 2014ರಲ್ಲಿ ಎನ್ ಡಿಎ ಸರ್ಕಾರ ರಚನೆಯಾದಾಗ ಬಿಜೆಪಿ ನಂತರ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ತಾವು ಕೇಳಿದ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕೆ ಸಚಿವ ಸಂಪುಟದಿಂದ ಹೊರಗೆ ಉಳಿಯಲು ನಿರ್ಧರಿಸಿತು.
2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯ 343 ರಲ್ಲಿ 303 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಜೆಡಿಯು 15 ಸ್ಥಾನಗಳನ್ನು ಪಡೆದಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter