ಶಾಸಕರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ: ಬಿಜೆಪಿ ಕಿಡಿ

ಶಾಸಕರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ: ಬಿಜೆಪಿ ಕಿಡಿ


ಬೆಳಗಾಯಿತು ವಾರ್ತೆ
ಹರಪನಹಳ್ಳಿ: ಕಾಂಗ್ರೆಸ್ ಪಕ್ಷದ ನಾಯಕರಿಂದ ಹೇಳಿಸಿಕೊಂಡು ರಾಜಕಾರಣ ಮಾಡುವ ಅಗತ್ಯ ಬಿಜೆಪಿಗೆ ಇಲ್ಲ. ಜನಪರ ಶಾಸಕ ಕರುಣಾಕರರೆಡ್ಡಿ ಅವರನ್ನು ಟೀಕಿಸುವ ಹಕ್ಕು ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಹರಪನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡಲೆಂದು ಶಾಸಕರು ಸರ್ವ ಪಕ್ಷ ಸಭೆಯನ್ನು ಕರೆದಿದ್ದಾರೆ. ಯಾವುದೇ ಕಾರಣಕ್ಕೂ ಹೊಸಪೇಟೆ ಜಿಲ್ಲೆಯಾಗಲು ಬಿಡುವುದಿಲ್ಲ. ನಮ್ಮ ಶಾಸಕರನ್ನು ಅತಿಥಿ ಶಾಸಕರು ಎಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ಪ್ರವಾಹ ಬಂದ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ಬಿದ್ದ ಮನೆಗಳಿಗೆ ಭೇಟಿ ನೀಡಿ ಪರಿಹಾರ ವಿತರಿಸಿದ್ದಾರೆ. ಆಗ ಕಾಂಗ್ರೆಸ್ ನಾಯಕರು ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ ಮಾತನಾಡಿ, ಹರಪನಹಳ್ಳಿಗೆ 371ಜೆ ಕಲಂ ಸೌಲಭ್ಯಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಕರುಣಾಕರರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಹೈದರಾಬಾದ್ ಕರ್ನಾಟಕ ಫಲ ಕಾಂಗ್ರೆಸ್ ಪಾಲಾಯಿತು. ಶಾಸಕರು ಬಳ್ಳಾರಿ ಜಿಲ್ಲೆ ಅಖಂಡವಾಗಿರುವಂತೆ ಹೇಳಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ವಿಜಯನಗರ ಜಿಲ್ಲೆ ಮಾಡಲು ಬಿಡುವುದಿಲ್ಲ, ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವುದಾದರೆ ಹರಪನಹಳ್ಳಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಾಸಕರು ಸಭೆ ನಡೆಸಿ ಮುಖ್ಯಮಂತ್ರಿಗಳ ಬಳಿ ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಲಿದ್ದಾರೆ. ಅದರೂ ಕಾಂಗ್ರೆಸ್‍ನವರು ಪ್ರಚಾರಕ್ಕಾಗಿ ಶಾಸಕರನ್ನು ಟೀಕಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಆರ್.ಲೋಕೇಶ್ ಮಾತನಾಡಿ, ಬಿಜೆಪಿ ಪಕ್ಷವನ್ನು ಟೀಕಿಸುವ ಕಾಂಗ್ರೆಸ್ ಮುಖಂಡ ಉಮೇಶ್ ಬಾಬು ಅವರು ತಾಲ್ಲೂಕಿನ ಕಾಂಗ್ರೆಸ್ ಪಕ್ಷಕ್ಕೆ ಮೂರು ಬಾಗಿಲು ಆಗಿದೆ ಅದನ್ನು ಮೊದಲು ಸರಿಪಡಿಸಿಕೊಳ್ಳಿ. ಕಾಂಗ್ರೆಸ್ ಕಾರ್ಯಕರ್ತರು ಯಾರ ಯಾರ ಜೊತೆಯಲ್ಲಿ ಇದ್ದಾರೆ ಮೊದಲು ತಿಳಿದುಕೊಂಡು ಮಾತನಾಡಬೇಕು. ಶಾಸಕರು ವಾರದಲ್ಲಿ ಮೂರು ದಿನ ಹರಪನಹಳ್ಳಿಯೇ ಇರುತ್ತಾರೆ. ಓರ್ವ ಗ್ರಾ.ಪಂ ಸದಸ್ಯನಾಗಿರುವ ಶಿವಕುಮಾರನಾಯ್ಕ ಅವರು ಕ್ಷೇತ್ರದ ಶಾಸಕರು ಜಿಲ್ಲಾ ಹೋರಾಟಕ್ಕೆ ಬರಲಿಲ್ಲ ಅಂದ್ರೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎನ್ನುತ್ತಾರೆ. ತಮ್ಮ ವ್ಯಾಪ್ತಿ, ಇತಿಮಿತಿ ತಿಳಿದು ಮಾತನಾಡಬೇಕು. ಶಾಸಕರ ಬಗ್ಗೆ ಟೀಕಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ ಮಾತನಾಡಿ, ಪುರಸಭೆ ಮಾಜಿ ಅಧ್ಯಕ್ಷ ಹಾಲೇಶ್ ಅವರಿಗೆ ಶಾಸಕರು ಮತ್ತು ಬಿಜೆಪಿ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಮೊದಲು ಬಿಜೆಪಿ ಪಕ್ಷದ ಋಣ ತೀರಿಸಲಿ. ಕರುಣಾಕರರೆಡ್ಡಿ ಅವರು ಅತಿಥಿ ಶಾಸಕರಲ್ಲ, ಕ್ರಿಯಾಶೀಲ ಶಾಸಕರು. ಹೆಚ್. ಕೆ.ಹಾಲೇಶ್ ಅವರು ಇಪ್ಪತ್ತು ವರ್ಷ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕಾಂಗ್ರೆಸ್ ಪಕ್ಷ ಅವರನ್ನ ಕೇವಲ ಪುರಸಭೆ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ. ನಾವು ಅವರನ್ನ ಬಿಜೆಪಿಗೆ ಕರೆತಂದು ಒಂದೇ ದಿನದಲ್ಲಿ ಪುರಸಭೆ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರ ಯೋಗ್ಯತೆಗೆ ಬಿಜೆಪಿ ಪಕ್ಷದ ಋಣ ತೀರಸಲಿಕ್ಕೆ ಆಗಲಿಲ್ಲ. ಅವರು ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ತಾ.ಪಂ ಉಪಾಧ್ಯಕ್ಷ ಎಲ್.ಮಜ್ಯಾನಾಯ್ಕ್, ಬಿಜೆಪಿ ತಾಲೂಕು ಕಾರ್ಯದರ್ಶಿಗಳಾದ ಎಸ್.ಪಿ.ಲಿಂಬ್ಯಾನಾಯ್ಕ, ರಾಘವೇಂದ್ರಶೆಟ್ಟಿ, ಮುಖಂಡರಾದ ಕೆ.ಕೃಷ್ಣ, ಬಿ.ವೈ.ವೆಂಕಟೇಶನಾಯ್ಕ, ಟಿ.ತಿಮ್ಮಪ್ಪ, ಟಿ.ಗಿರೀಶ್ ಇತರರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.