ನಿರ್ಭೀತರಾಗಿ ರೋಗಿಗೆ ಚಿಕಿತ್ಸೆ ಕೊಡುವಂತಾಗಬೇಕು

Share on facebook
Share on twitter
Share on linkedin
Share on whatsapp
Share on email


ಬೆಳಗಾಯಿತು ವಾರ್ತೆ
ಬಳ್ಳಾರಿ: ನಮ್ಮ ಮನಸ್ಸಿಗೆ ತಪ್ಪೆನಿಸಿದರೂ ಇಂದು ಅನಿವಾರ್ಯವಾಗಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷರಾದ ಡಾ. ಮಧುಸೂದನ ಕಾರಿಗನೂರು ಅವರು ಬೇಸರದಿಂದ ಹೇಳಿದ ಮಾತಿದು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಕಛೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿದರು.

ನ.1 ರಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ಕರವೇ ಕಾರ್ಯಕರ್ತರು ನಡೆಸಿದ ಹಲ್ಲೆಯನ್ನು ಖಂಡಿಸಿ ಶುಕ್ರವಾರ ಬೆಳಿಗ್ಗೆ 6 ರಿಂದ ಶನಿವಾರ ಬೆಳಿಗ್ಗೆ 6 ಗಂಟೆಯವರೆಗೆ ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗುತ್ತದೆ. ಆದರೆ ತುರ್ತು ಚಿಕಿತ್ಸೆಗೆ ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ಮುಂದುವರಿಯಲಿದೆ ಎಂದರು.
ಈ ರೀತಿ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವುದರಿಂದ, ವೈದ್ಯರ ಆತ್ಮಸ್ಥೈರ್ಯವು ಕುಗ್ಗಿ, ಅವರು ತೆಗೆದುಕೊಳ್ಳುವ ಚಿಕಿತ್ಸಾ ವಿಧಾನದ ಮೇಲೂ ಪ್ರಭಾವ ಬೀರುತ್ತದೆ. 2009 ರಲ್ಲಿ ಕರ್ನಾಟಕ ಸರ್ಕಾರವು ವೈದ್ಯರ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಯ ವಸ್ತುಗಳನ್ನು ಧ್ವಂಸಗೊಳಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿದೆ. ಆದರೆ ಈ ಆದೇಶ ಕಾಗದದ ಹುಲಿಯಂತಾಗಿದೆ. ವೈದ್ಯರು ಮುಕ್ತವಾಗಿ ರೋಗಿಗೆ ಚಿಕಿತ್ಸೆ ಕೊಡುವಂತಾಗಬೇಕು ಎಂದು ಡಾ. ಮಧುಸೂಧನ ಕಾರಿಗನೂರು ಅವರು ಹೇಳಿದರು.


ಈ ಸಂದರ್ಭದಲ್ಲಿ ವೈದ್ಯರಾದ ಡಾ. ಸಾಗರ್, ಡಾ. ನಿವೇದಿತಾ, ಡಾ. ಶ್ರೀನಿವಾಸ, ಡಾ. ವಿಜಯ್‍ಕುಮಾರ್, ಡಾ. ಗೋವರ್ಧನರೆಡ್ಡಿ, ಪ್ರವೀಣ್ ಇತರರು ಇದ್ದರು.

ಬಳ್ಳಾರಿ ನಗರದಲ್ಲಿಯೇ ಕಳೆದ ಆರು ತಿಂಗಳಲ್ಲಿ ವೈದ್ಯರ ಮೇಲೆ ದಾಳಿ ಮಾಡಿದ 10 ಪ್ರಕರಣಗಳು ದಾಖಲಾಗಿವೆ. ಇಂದು ಕರ್ನಾಟಕಾದ್ಯಂತ ಇರುವ 27 ಸಾವಿರ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳನ್ನು ಬಂದ್ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇದೇ ಭಾನುವಾರದಂದು ಬೆಂಗಳೂರಿನಲ್ಲಿ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿದ್ದು, ಅಲ್ಲಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು- ಡಾ. ಯೋಗಾನಂದ, ವೈದ್ಯರು.

ಪ್ರಮುಖ ಬೇಡಿಕೆ:
1.ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಶೀಘ್ರವಾಗಿ ಬಂಧಿಸಬೇಕು
2.ವೈದ್ಯರ ಮೇಲೆ ಹಲ್ಲೆ ಮಾಡುವುದನ್ನು ಹಾಗೂ ಅವರ ಕೆಲಸಕ್ಕೆ ಅಡ್ಡಿಪಡಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಸರ್ಕಾರ ಎಲ್ಲಾ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು 3.ರೋಗಿಗೆ ಚಿಕಿತ್ಸೆ ನೀಡಲು ಮುಕ್ತ ವಾತಾವರಣ ನಿರ್ಮಿಸುವುದು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter