ಉಪ ಸಮರ: 15 ಕ್ಷೇತ್ರಗಳಲ್ಲಿ ಮತದಾನ ಆರಂಭ

Share on facebook
Share on twitter
Share on linkedin
Share on whatsapp
Share on email


ಬೆಂಗಳೂರು :ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ.

ಗೋಕಾಕ, ಕಾಗವಾಡ, ಅಥಣಿ, ಯಲ್ಲಾಪುರ, ವಿಜಯನಗರ, ರಾಣೆಬೆನ್ನೂರು, ಹಿರೇಕೆರೂರು, ಹುಣಸೂರು, ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರ, ಶಿವಾಜಿ ನಗರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಒಟ್ಟು 15 ಕ್ಷೇತ್ರಗಳಲ್ಲಿ 165 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಜೆಡಿಎಸ್ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಒಟ್ಟು 37,82,681 ಮತದಾರರು 165 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

ಸಮರದ ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ತಮ್ಮ ಕುಟುಂಬ ಸದಸ್ಯರ ಜೊತೆಗೂಡಿ ಮತದಾನ ಮಾಡಿದರು. ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂ‌ಟಿ‌ಬಿ ನಾಗರಾಜ್ ಹಾಗೂ ಕಾಂಗ್ರೆಸ್‌ನ ಪದ್ಮಾವತಿ ಅವರಿಗೆ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಮತದಾನಕ್ಕೆ ಅವಕಾಶವಿಲ್ಲ.
ಶಿವಾಜಿನಗರದ ಬೆನ್ಸನ್ ಟೌನ್ ಖವ್ವಾಯತ್ ಇಸ್ಲಾಂ ಕಾಲೇಜಿನ ಮತಗಟ್ಟೆಯಲ್ಲಿ ಮಾಜಿ ಸಚಿವ ಬಿ.ಝಡ್.ಜಮೀರ್ ಅಹ್ಮದ್‌ಖಾನ್ ಮತದಾನ ಮಾಡಿದರು. ಇಲ್ಲಿನ ಚಂದ್ರು ಎಂಬ ವ್ಯಕ್ತಿ ಮತದಾನ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದ್ದು, ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ದ ಘಟನೆ ಜರುಗಿತು.
ಮತದಾನದ ಬಳಿಕ ಜಮೀರ್ ಅಹ್ಮದ್ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ‌ದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆ ಪ್ರತಿ ಬಾರಿಯೂ ಮೋಸವಾಗಿದೆ. ಈ ಬಾರಿ ಜನ ರಿಜ್ವಾನ್ ಮೇಲೆ ಮತದಾರರು ಹೆಚ್ಚಿನ ಒಲವು ತೋರಲಿದ್ದಾರೆ. ಲೋಕಸಭಾ‌ ಚುನಾವಣೆಯಲ್ಲಿ ರಿಜ್ವಾನ್ ಪರಾಜಯಗೊಂಡಿರಬಹುದು ,ಆದರೆ ಈ ಬಾರಿ ಕ್ಷೇತ್ರದ‌ ಜನ ಅವರ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಸಂಪಂಗಿ ರಾಮನಗರದ ಬಿಬಿಎಂಪಿ ಸದಸ್ಯರನ್ನು ಬಿಜೆಪಿ ನಾಯಕರು ಎಳೆದುಕೊಂಡಿದೆ. ಈಗ ಈ ಬಗ್ಗೆ ಏನು ಮಾತನಾಡುವುದಿಲ್ಲ. ಸಂಜೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯ ಬಿಜೆಪಿ ಸೇರ್ಪಡೆ ಹೇಗೆ ಎನ್ನುವುದನ್ನು ಹೇಳುತ್ತೇನೆ. ಈ ಬಾರಿ ಜನ ಸರಿಯಾದವರನ್ನೇ ಆಯ್ಕೆ ಮಾಡುತ್ತಾರೆ ಎಂದರು.
ಹುಣಸೂರು ಉಪಚುನಾವಣಾ ಸಮರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಹಾಗೂ ಬಿಜೆಪಿಯ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತದಾನಕ್ಕೂ ಮುನ್ನ ಇಲ್ಲಿನ ಸಾಯಿಬಾಬ ದೇವಸ್ಥಾನಕ್ಕೆ ಭೇಟಿದರು. ಇಬ್ಬರು ಒಂದೇ ಸಮಯಕ್ಕೆ ದೇವಸ್ಥಾನಕ್ಕೆ ಆಗಮಿಸಿದ್ದು
ಪರಸ್ಪರ ಮುಖಾಮುಖಿಯಾದರು. ಸಾಯಿಬಾಬ ದರ್ಶನ ಪಡೆದು ಇಬ್ಬರು ಮತಕೇಂದ್ರಕ್ಕೆ‌ ತೆರಳಿದರು. ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ದೇವರಹಳ್ಳಿಯ ಸರ್ಕಾರ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮತದಾನಕ್ಕೂ ಮುನ್ನ ತಮ್ಮ‌ನಿವಾಸದಲ್ಲಿ ಉಪ ಚುನಾವಣೆ ಗೆಲುವಿಗಾಗಿ ಹೋಮ, ಹವನ ನಡೆಸಿದರು. ಬಳಿಕ ಕುಟುಂಬ ಸಮೇತರಾಗಿ ಕೆ.ಆರ್.ಪೇಟೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಮತದಾನಕ್ಕೂ ಮುನ್ನ ಚಪ್ಪಲಿ ಕಳಚಿಟ್ಟು ಇವಿಎಂ ಮತ ಯಂತ್ರಕ್ಕೆ ಮೂರು ಬಾರಿ ನಮಸ್ಕರಿಸಿದರು.
ಬಳಿಕ ವಿಜಯದ ಸಂಕೇತದೊಂದಿಗೆ ಮತಗಟ್ಟೆಯಿಂದ ಹೊರ ಬಂದ ನಾರಾಯಗೌಡ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿ ತಮ್ಮ ನಾಯಕ ಹೆಚ್.ಡಿ.ರೇವಣ್ಣ ಅವರಂತೆ ಮತದಾನಕ್ಕೂ ಮುನ್ನ ವಾಸ್ತುವಿನ‌ ಮೊರೆ ಹೋದರು‌. ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಹುಟ್ಟೂರು ಬಂಡಿಹೊಳೆ ಮತಗಟ್ಟೆ ಸಂಖ್ಯೆ 151ರಲ್ಲಿ ಮತದಾನ ಮಾಡಲು ಹೋದಾಗ‌ ಮತಯಂತ್ರ ವಾಸ್ತುಪ್ರಕಾರ ಇಲ್ಲವೆಂದು ಚುನಾವಣಾ ಸಿಬ್ಬಂದಿಗೆ ಹೇಳಿದರು. ಬಳಿಕ ಚುನಾವಣಾ ಸಿಬ್ಬಂದಿಗೆ ಸೂಚಿಸಿ ಮತಯಂತ್ರ‌ದ ದಿಕ್ಕು ಬದಲಾದಾಗ ದೇವರಾಜ್ ಮತದಾನ ಮಾಡಿದರು.
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಅನರ್ಹರ ನಾಯಕ ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರೀ ಸಹಿತ ಗೋಕಾಕ್ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು‌. ಬಳಿಕ ಬೆರಳಿಗೆ ಹಚ್ಚಿದ ಶಾಯಿಯನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.
ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಕುಟುಂಬ ಸಮೇತ ಇಲ್ಲಿನ ಅಬ್ದುಲ್ ಕಲಾಂ ಶಾಲೆಯ ಮತಗಟ್ಟೆ ಸಂಖ್ಯೆ 77 ರಲ್ಲಿ ಮತದಾನ ಮಾಡಿದರು. ಗಜಾನನ ಬಿಜೆಪಿ ಅವರು ಕಳೆದ ಎರಡು ದಿನಗಳಿಂದ ಹಣ, ಹೆಂಡದ ಹಂಚಿದ್ದಾರೆ. ಆದರೆ ಸ್ವಾಭಿಮಾನಿಗಳಾಗಿರುವ ಅಥಣಿಯ ಮತದಾರರು ತಮ್ಮನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.‌
ಹಾವೇರಿ ಜಿಲ್ಲೆಯ ಹಿರೆಕೆರೂರಿನ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬಾಳೀಂಬಿಡ ಗ್ರಾಮದಲ್ಲಿ ಮತಚಲಾಯಿಸಿದರು.
ಬಳಿಕ ಮಾತನಾಡಿದ ಅವರು, 40 ಸಾವಿರ ಅಂತರಗಳಿಂದ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನೂರಕ್ಕೆ ನೂರು ಸುಭದ್ರವಾಗಿದೆ. ಸರ್ಕಾರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಹದಿನೈದು ಕ್ಷೇತ್ರಗಳಲ್ಲಿಯೂ ತಮ್ಮ ಅಭಿಮಾನಿಗಳು ‌ಇದ್ದು ಎಲ್ಲರೂ ಬಿಜೆಪಿಗೆ ಮತಚಲಾಯಿಸುವಂತೆ‌ ಮನವಿ‌ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಬಿ ಹೆಚ್ ಬನ್ನಿಕೋಡ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾವಿನತೋಪು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್, ಕೆಂಗೇರಿ ಉಪನಗರದ ಭಾನು ವಿದ್ಯಾ ಸಂಸ್ಥೆಗೆ ಪಕ್ಷದ‌ ಕಾರ್ಯಕರ್ತರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿ, ಉಪಚುನಾಣೆಗೆ ಕಾರಣರಾದವರಿಗೆ ಜನ ತಕ್ಕ ಪಾಠ ತಲಿಸಲಿದ್ದು
ಕಾಂಗ್ರೆಸ್ ಅನ್ನು ಜನ ಕೈ ಹಿಡಿಯುತ್ತಾರೆ. ಎಲ್ಲಾ ಬೂತ್ ಗಳಲ್ಲೂ ಕಾಂಗ್ರೆಸ್ ಟೇಬಲ್ ಇದೆ. ಸೋಲುವಭಯದಿಂದ ನಾಯಕ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ಒತ್ತಡ ಹೇರುವ ಮೂಲಕ ಐಟಿ,ಇಡಿಯಿಂದ ನೊಟೀಸ್ ನೀಡುತ್ತಿದೆ. ದುಡ್ಡು ಹಂಚಿ, ಅಬ್ಬರದ ಪ್ರಚಾರ ಮಾಡಿದರೆ ಮಾತ್ರ ಚುನಾವಣೆ ಅಲ್ಲ ಎಂದರು.

ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಆನಂದ್ ಸಿಂಗ್ ತಮ್ಮ ಅದೃಷ್ಟದ ಗುಲಾಬಿ ಬಣ್ಣದ ಶರ್ಟ್ ಧರಿಸಿ ಪತ್ನಿ ಸೊಸೆ ಜೊತೆಗೆ ಹೊಸಪೇಟೆ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಮತದಾನದ‌ ಬಳಿಕ‌ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಯಾಗಬೇಕಿದೆ, ಅಭಿವೃದ್ಧಿ ಕಲ್ಪನೆ ಕಾರ್ಯರೂಪಕ್ಕೆ ತರುವ ಅತುರದಲ್ಲಿ‌ದ್ದು ಜನರ ಊಹೆಗೂ ಮೀರಿ ಅಭಿವೃದ್ಧಿ ಮಾಡುವುದಾಗಿ ಹೇಳಿದರು.
ಕನಸುಗಾರಗಾರನಾಗಿರುವ ತಾವು ಕ್ಷೇತ್ರದ ಅಭಿವೃದ್ಧಿ ಕನಸು ಹೊತ್ತಿದ್ದೇನೆ. ರಾಜ್ಯದಲ್ಲಿ ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಇದು ಅತಿಯಾದ ಆತ್ಮವಿಶ್ವಾಸ ಅಲ್ಲ, ಮನಸಿನ ಮಾತು ಎಂದರು.
ಆನಂದ್ ಸಿಂಗ್ ಪತ್ನಿ ಲಕ್ಷ್ಮೀ ಮತದಾನದ ಬಳಿಕ ಮಾತನಾಡಿ, ಪತಿ ಗೆಲ್ಲುವ ವಿಶ್ವಾಸವಿದೆ. ಮನೆ, ಮಗನ ಮದುವೆ ಬಿಟ್ಟು ಜನರಿಗಾಗಿ ಚುನಾವಣೆ ಬಂದಿದ್ದಾರೆ‌ ಎಂದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter