ಜ.26ರಂದು ಲೋಕಾರ್ಪಣೆ ದೂರಿಗೆ 30 ದಿನಗಳಲ್ಲಿ ಪರಿಹಾರ ಸಾರ್ವಜನಿಕರ ಸಮಸ್ಯೆಗಳಿಗೆ ‘ಇ-ಸ್ಪಂದನೆ’

ಜ.26ರಂದು ಲೋಕಾರ್ಪಣೆ ದೂರಿಗೆ 30 ದಿನಗಳಲ್ಲಿ ಪರಿಹಾರ ಸಾರ್ವಜನಿಕರ ಸಮಸ್ಯೆಗಳಿಗೆ ‘ಇ-ಸ್ಪಂದನೆ’


ಬಳ್ಳಾರಿ : ತಮ್ಮ ಸಮಸ್ಯೆಗಳು ಸರಕಾರಿ ಅಧಿಕಾರಿಗಳು ಕೇಳುತ್ತಿಲ್ಲ; ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರಿಂದ ಬರುವ ಗೋಳಿನ ವ್ಯಥೆಗೆ ಇನ್ಮುಂದೆಗೆ ಬ್ರೇಕ್ ಬಿಳಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದಕ್ಕಿಟ್ಟಿರುವ ಹೆಸರು ಇ-ಸ್ಪಂದನೆ!.

ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಪಂ ಕಚೇರಿ ವ್ಯಾಪ್ತಿಯಲ್ಲಿ ಬಂದಿರುವ ಸಾರ್ವಜನಿಕ ಕುಂದುಕೊರತೆಗಳನ್ನು ವಿದ್ಯುನ್ಮಾನ ವ್ಯವಸ್ಥೆಯ ಮುಖಾಂತರ ಶೀಘ್ರವಾಗಿ ಪರಿಹರಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿಯೇ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಪಂ ಕಚೇರಿಗಳಲ್ಲಿ ಒಂದು ಕೋಶ ಆರಂಭಿಸಲು ನಿರ್ಧರಿಸಲಾಗಿದ್ದು, ಮೊದಲಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇದು ಆರಂಭಿಸಲಾಗುತ್ತದೆ. ಇದಕ್ಕೆ ಒಂದು ಮೊಬೈಲ್ ನಂಬರ್ ಫಿಕ್ಸ್ ಮಾಡಲಾಗುತ್ತಿದ್ದು, ಅದಕ್ಕೆ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಬಹುದಾಗಿದೆ.
ಡಿಸಿ ಕಚೇರಿಯಲ್ಲಿ ಆರಂಭಿಸಲಾಗುವ ಈ ಇ-ಸ್ಪಂದನೆ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದೂರುದಾರರ ಹೆಸರು, ದೂರಿನ ವಿವರ ಹಾಗೂ ವಿಳಾಸ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡು ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇರುತ್ತದೆಯೋ ಅದಕ್ಕೆ ಸಂಬಂಧಿಸಿದ ಜಿಲ್ಲಾಮಟ್ಟದ ಅಥವಾ ತಾಲೂಕುಮಟ್ಟದ ಅಧಿಕಾರಿಗಳಿಗೆ ಎಸ್‍ಎಂಎಸ್ ಮೂಲಕ ರವಾನಿಸಲಿದ್ದಾರೆ. ಬರಲಿರುವ ಎಸ್‍ಎಂಎಸ್‍ಲಿಂಕ್‍ನ್ನು ಒತ್ತುವುದರ ಮೂಲಕ ಅವರು ನೋಡಿಕೊಂಡು ಅದಕ್ಕೆ ಸಂಬಂಧಿಸಿದ ನಿರ್ಧಿಷ್ಠ ಉತ್ತರವನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಬಹುದಾಗಿದೆ. ಅವರು ಕಳುಹಿಸುವುದಕ್ಕೆ ಸ್ವೀಕೃತಿ ಮತ್ತು ದೂರುದಾರರಿಗೂ ಕೂಡ ತಮ್ಮ ದೂರಿನ ಪ್ರಗತಿಯನ್ನು ಅವರಿಗೆ ಬರಲಿರುವ ಎಸ್‍ಎಂಎಸ್ ಲಿಂಕ್ ಮೂಲಕವೇ ವೀಕ್ಷಿಸಬಹುದಾಗಿದೆ.
ನೋ ಲಾಗಿನ್: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಇ-ಸಂದನ ಕೋಶಕ್ಕೆ ಮಾತ್ರ ಲಾಗೀನ್ ವ್ಯವಸ್ಥೆ ಇರುತ್ತದೆ.

ಅಧಿಕಾರಿಗಳಿಗೆ ಯಾವುದೇ ರೀತಿಯ ಲಾಗಿನ್ ಇರುವುದಿಲ್ಲ. ಎಸ್‍ಎಂಎಸ್‍ನಲ್ಲಿ ಬಂದಿರುವ ವೆಬ್‍ಲಿಂಕ್‍ನ್ನು ಕ್ಲಿಕ್ಕಿಸಿ,ಸದರಿ ಕುಂದುಕೊರತೆಯ ಬಗ್ಗೆ ತಮ್ಮ ಕ್ರಮವನ್ನು ನಮೂದಿಸಲಿದ್ದಾರೆ. ಅಧಿಕಾರಿಗಳು ತಮ್ಮ ಹಂತದಲ್ಲಿ ಕ್ರಮವಹಿಸದೆ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಬಹುದಾಗಿದೆ.
ಜಿಲ್ಲಾಮಟ್ಟದ ಅಧಿಕಾರಿಗಳು ತಮಗೆ ಬಂದ ಕೆಳಹಂತದ ಅಧಿಕಾರಿಗಳಿಗೆ ಎಸ್‍ಎಂಎಸ್ ಫಾರ್ವರ್ಡ್ ಮಾಡಿ ಅವರಿಂದ ತಮ್ಮ ಕ್ರಮವನ್ನು ನಮೂದಿಸಬಹುದು.
ಸಾಮಾನ್ಯವಾಗಿ ಒಂದು ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ 30 ದಿನಗಳ ಕಾಲಾವಶಕಾಶ ನೀಡಲಾಗಿದ್ದು, ಅಷ್ಟರೊಳಗೆ ನಿರ್ಧಿಷ್ಠ ಉತ್ತರ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿ ಕಳುಹಿಸಲು ಅವಧಿ ನಿಗದಿಪಡಿಸಲಾಗಿದೆ.
ಕುಂದುಕೊರತೆಗಳನ್ನು ವರ್ಗಿಕರಿಸಲು ಆಯಾ ವರ್ಗದ ಕುಂದುಕೊರತೆಗಳಿಗೆ ಅಧಿಕಾರಿಗಳು ಕ್ರಮವಹಿಸಲು ನಿರ್ಧಿಷ್ಠ ದಿನಗಳನ್ನು ನಿಗದಿಪಡಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿವರಿಸುತ್ತಾರೆ.
ಈ ವೆಬ್‍ಸೈಟ್‍ನ್ನು ಬಳ್ಳಾರಿ ಎನ್‍ಐಸಿ ತಂಡ ಅಭಿವೃದ್ಧಿಪಡಿಸಿದೆ.ಸದ್ಯ ಟ್ರಯಲ್ ಮಾಡಲಾಗುತ್ತಿದ್ದು, ಜ.26ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲ ಅಧಿಕಾರಿಗಳು ಇದರ ಬಗ್ಗೆ ತಿಳಿದುಕೊಂಡು ಕಾರ್ಯನಿರ್ವಹಿಸಬೇಕು ಮತ್ತು ನಿರ್ಧಿಷ್ಠ ಸಮಸ್ಯೆಗೆ ಕಾಟಾಚಾರದ ಉತ್ತರ ಬದಲು ನಿರ್ಧಿಷ್ಠ ಉತ್ತರ ಹಾಗೂ ದಾಖಲೆಗಳು ನೀಡಬೇಕು ಎಂದು ಅವರು ಸೂಚಿಸಿದ್ದಾರೆ.
*ಇ-ಆಫೀಸ್ ಜಿಲ್ಲೆಯ ಎಲ್ಲ ಕಂದಾಯ ಕಾರ್ಯಾಲಯಗಳಲ್ಲಿ ಶೀಘ್ರ ಆರಂಭ:ಡಿಸಿ ನಕುಲ್
ಕಾಗದ ರಹಿತ ಕಚೇರಿ ವ್ಯವಸ್ಥೆ(ಇ-ಆಫೀಸ್)ಯನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಪಂ ಕಚೇರಿ, ಬಳ್ಳಾರಿ ಹಾಗೂ ಹರಪನಳ್ಳಿ ಎಸಿ ಕಚೇರಿ, ಡಿಯುಡಿಸಿ ಕಚೇರಿ ಹಾಗೂ ಎಸ್ಪಿ ಕಚೇರಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದು,ಜಿಲ್ಲೆಯಲ್ಲಿರುವ ಎಲ್ಲ ಕಂದಾಯ ಕಾರ್ಯಾಲಯಗಳಲ್ಲಿ ಇ-ಆಫೀಸ್ ಶೀಘ್ರ ಆರಂಭಿಸಲಾಗುವುದು ಎಂದು ಡಿಸಿ ನಕುಲ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಇ-ಸ್ಪಂದನಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಳಿದ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಕಚೇರಿಗಳಲ್ಲಿಯೂ ಇ-ಆಫೀಸ್ ಆರಂಭಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಇದಕ್ಕೆ ಬೇಕಾದ ತರಬೇತಿ ಹಾಗೂ ಇನ್ನೀತರ ಅಗತ್ಯವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.